ಸಾರಿಗೆ ನೌಕರರು, ಸರ್ಕಾರದ ನಡುವೆ ಮೂಡದ ಒಮ್ಮತ; ಸಂಧಾನ ಸಭೆ ವಿಫಲ

ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ನಡೆದ ಸಭೆಯಲ್ಲಿ ವಿಫಲವಾಗಿರುವುದರಿಂದ ರಾತ್ರೋರಾತ್ರಿ  ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ತೆರಳಿದ್ದಾರೆ.

ಸಾರಿಗೆ ನೌಕರರು, ಸರ್ಕಾರದ ನಡುವೆ ಮೂಡದ ಒಮ್ಮತ; ಸಂಧಾನ ಸಭೆ ವಿಫಲ
ಕೆಎಸ್​ಆರ್​ಟಿಸಿ ಬಸ್ (ಸಾಂದರ್ಭಿಕ ಚಿತ್ರ)​

Updated on: Mar 15, 2023 | 11:00 PM

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ ಬೆನ್ನಲ್ಲೇ ಸರ್ಕಾರವು 4 ನಿಗಮಗಳ ಎಂಡಿಗಳ ಜತೆ ಸಭೆ ನಡೆಸಿದೆ. ಆದರೆ, ನಿಗಮಗಳ ನೌಕರರು ವೇತನ ಹೆಚ್ಚಳದ ಬೇಡಿಕೆ ಸಡಿಲಿಸಲು ಸಮ್ಮತಿಸದೆ ಪಟ್ಟು ಹಿಡಿದ ಕಾರಣ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ. ಇದರ ಬೆನ್ನಲ್ಲೇ ರಾತ್ರೋರಾತ್ರಿ  ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಮ್ಮನ್ನು ಭೇಟಿಯಾಗುವಂತೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಬುಧವಾರ ರಾತ್ರಿ ಅನ್ಬುಕುಮಾರ್ ಅವರು ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದಾರೆ. ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

ಸಾರಿಗೆ ನೌಕರರು ಶೇಕಡಾ 22ರ ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ (KKRTC), ವಾಯುವ್ಯ ಸಾರಿಗೆ (NWKRTC) ಎಂಡಿಗಳು ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಿದರು. ಉಳಿದಂತೆ ಅನ್ಬು ಕುಮಾರ್ ಮತ್ತು ಬಿಎಂಟಿಸಿ ಎಂಡಿ ಜಿ. ಸತ್ಯವತಿ ಮತ್ತು ಹಿರಿಯ ‌ಅಧಿಕಾರಿಗಳು ಸಭೆಯಲ್ಲಿ ಭಾಗಿಯಾದರು. ಯೂನಿಯನ್ ನಾಯಕರೂ ಸಹ ಸಾರಿಗೆ ಅಧಿಕಾರಿಗಳ ಜೊತೆ ಸಭೆಯಲ್ಲಿ ಭಾಗಿಯಾದರು. ಸತತ 4 ಗಂಟೆ ಸಭೆ ನಡೆಸಲಾಗಿದ್ದು ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ.

ನೌಕರರ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆದಿದೆ.

ವೇತನ ಶೇಕಡಾ 14ರಷ್ಟು ಹೆಚ್ಚಿಸುವುದಾಗಿ ಹೇಳಿದರು. ಅದನ್ನು ನಾವು ಒಪ್ಪಿಲ್ಲ. ಕೆಪಿಟಿಸಿಎಲ್ ನೌಕರರಿಗೆ ಶೇ 20, ಸರ್ಕಾರಿ ನೌಕರರಿಗೆ ಶೇ 17ರಷ್ಟು ವೇತನ ಹೆಚ್ಚಿಸಿದ್ದಾರೆ. ಸಾರಿಗೆ ನೌಕರರಿಗೆ ಶೇ 14ರಷ್ಟು ಸಂಬಳ ಹೆಚ್ಚಿಸುವುದಾಗಿ ಹೇಳಿದರು. ನಾವಿದನ್ನು ಒಪ್ಪಿಲ್ಲ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅಂಗಳದಲ್ಲಿ ನಮ್ಮ ಬೇಡಿಕೆ ಇದೆ. ಮುಷ್ಕರ ನಡೆಯಬೇಕೇ, ಬೇಡವೇ ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್​.ವಿ. ಅನಂತ ಸುಬ್ಬರಾವ್ ಸಭೆಯ ಬಳಿಕ ಹೇಳಿದರು.

ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್​: ಮಾ.​ 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್​ಗಳು

ಮಾರ್ಚ್​ 21 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಿರುವುದಾಗಿ ಕೆಎಸ್​ಆರ್​ಟಿಸಿ ನೌಕರರು ಘೋಷಿಸಿದ್ದರು. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಅಂದಿನಿಂದ ​23,000 ಕೆಎಸ್​ಆರ್​ಟಿಸಿ ಬಸ್​ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘ ಹೇಳಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಹೇಳಿದ್ದರು. ಆದರೆ ಈವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ. ಇತ್ತೀಚಿಗೆ ಸರ್ಕಾರಿ ನೌಕರರು, ವೇತನ ಹೆಚ್ಚಳ ಸಂಬಂಧ ಪ್ರತಿಭಟನೆ ಮಾಡಿದ ವೇಳೆ ಸಿಎಂ ಬೊಮ್ಮಾಯಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು. ಆದರೆ ನಾವು ಇಷ್ಟು ವರ್ಷಗಳಿಂದ ಪ್ರಭಟನೆ ನಡೆಸುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಅವರು ಕೇವಲ ಶೇ 10 ರಷ್ಟು ಮಾತ್ರ ವೇತನ ಹೆಚ್ಚಿಸುವ ಭರವಸೆ ನೀಡಿದ್ದಾರೆ. ನಾವು ಅದನ್ನು ತಿರಸ್ಕರಿಸಿದ್ದೇವೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್​.ವಿ. ಅನಂತ ಸುಬ್ಬರಾವ್ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 pm, Wed, 15 March 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us