KSRTC ಸಿಬ್ಬಂದಿಗೆ ಗುಡ್ ನ್ಯೂಸ್: 1 ಕೋಟಿ ರೂ. ಮೊತ್ತದ ಅಪಘಾತ ವಿಮೆ ಜಾರಿ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ತನ್ನ ಸಿಬ್ಬಂದಿಗಳಿಗೆ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಿದೆ.
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) (KSRTC) ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ತನ್ನ ಸಿಬ್ಬಂದಿಗಳಿಗೆ 1 ಕೋಟಿ ಮೊತ್ತದ ಅಪಘಾತ ವಿಮಾ (Accident Insurance) ಯೋಜನೆ ಸೌಲಭ್ಯ ಜಾರಿ ಮಾಡಿದೆ. ಈ ಹಿಂದೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ 50 ಲಕ್ಷ ರೂ ವಿಮೆ ನೀಡುವುದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಈಗ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ರವರಿಂದ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂ. ಸೇರಿ ಒಟ್ಟು ರೂ.1 ಕೋಟಿ ಅಪಘಾತ ವಿಮೆ ನೀಡುವುದಾಗಿ ಕೆಎಸ್ಆರ್ಟಿಸಿ ಘೋಷಿಸಿದೆ.
ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿರುತ್ತದೆ.
ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಸಿಬ್ಬಂದಿಗಳಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿರುತ್ತದೆ. ಈ ವಿಮಾ ಯೋಜನೆಗೆ ಸಿಬ್ಬಂದಿಗಳು ಮಾಹೆಯಾನ ರೂ.62.50 + ಜಿ.ಎಸ್.ಟಿ ಸೇರಿದಂತೆ (ವಾರ್ಷಿಕ ರೂ.885/- ಪ್ರೀಮಿಯಂ) ಪಾವತಿಸಬೇಕಾಗುತ್ತದೆ.
ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಅತ್ಯುತ್ತಮವಾದ ಯೋಜನೆ ಈ ಕುರಿತು ಮಾತನಾಡಿದ ನಿಗಮದ ಮಾನ್ಯ ಅಧ್ಯಕ್ಷರಾದ ಶ್ರೀ ಎಂ. ಚಂದ್ರಪ್ಪ ನವರು ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದ್ದು, ಅಪಘಾತ (On duty ಮತ್ತು Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದು ಸಿಬ್ಬಂದಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಈ ಯೋಜನೆಗೆ ತುಂಬು ಹೃದಯದ ಸಹಕಾರ ನೀಡಿದ ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರಾದ ಅನಂತ ಸುಬ್ಬರಾವ್ ಮತ್ತು ಇತರೆ ಕಾರ್ಮಿಕ ಮುಖಂಡರುಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ರವರ ಸಹಯೋಗವನ್ನು ಶ್ಲಾಘಿಸಿದರು.
ಇಂದು ನಿಗಮದ ಕೇಂದ್ರ ಕಚೇರಿಯಲ್ಲಿ ಮಾನ್ಯ ಶಾಸಕರು ಹಾಗೂ ಅಧ್ಯಕ್ಷ ಎಂ. ಚಂದ್ರಪ್ಪರವರ ಸಮ್ಮುಖದಲ್ಲಿ ವಿ.ಅನ್ಬುಕುಮಾರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ಹಾಗೂ ಅಂಗ್ರೂಪ್ ಸೋನಂ, ಪ್ರಧಾನ ವ್ಯವಸ್ಥಾಪಕರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರು ಒಡಂಬಡಿಕೆಗೆ ಸಹಿ ಹಾಕಿದರು.
ಈ ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರುಗಳಾದ ಅನಂತ ಸುಬ್ಬರಾವ್ ಮತ್ತು ಇತರೆ ಕಾರ್ಮಿಕ ಸಂಘಗಳ ಮುಖಂಡರುಗಳು , ಉಷಾ ಚಂದ್ರಮೌಳಿ, ಪ್ರಾದೇಶಿಕ ವ್ಯವಸ್ಥಾಪಕರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ಬೆಂಗಳೂರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಮಾ ಪಡೆಯಲು ನಿಯಮಗಳು
- ಈ ಯೋಜನೆಯಲ್ಲಿ ಸಿಬ್ಬಂದಿಗಳು ಪ್ರತಿ ಮಾಹೆ ರೂ.62.50 + ಜಿ ಎಸ್ ಟಿ ಸೇರಿ ಪ್ರೀಮಿಯಂ (ವಾರ್ಷಿಕ ರೂ.750+ ಜಿ.ಎಸ್.ಟಿ ಸೇರಿದಂತೆ ಒಟ್ಟು ರೂ.885/-) ಪಾವತಿಸಬೇಕಾಗುತ್ತದೆ.
- ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
- ಅಪಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗ ವೈಕಲ್ಯಕ್ಕೆ ತುತ್ತಾದಲ್ಲಿ ಸಹ ರೂ. 50 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.
- ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
- ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದ ಪಕ್ಷದಲ್ಲಿ, ಆತನು ಚೇತರಿಸಿಕೊಳ್ಳುವವರೆಗೆ, ಅವನಿಗೆ ವಿಮಾ ಮಾಡಲಾದ ರೂ.50 ಲಕ್ಷ ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ ರೂ.5000 ಕ್ಕೆ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ ಶೇಕಡಾ 25ರಷ್ಟನ್ನು, ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡುವುದು.
- ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಂತಾಗಿದೆ. ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗಳಿಗೆ ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Mon, 14 November 22