ಮಂಡ್ಯ ಜಿಲ್ಲೆಯ ನಾಲ್ವರು ಯುವಕರಿಂದ ಚಿರತೆ ಸೆರೆ; ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು
ಚಿರತೆ ಸೆರೆ ವೇಳೆ ವ್ಯಾಘ್ರ ಆಕ್ರಮಣ ಮಾಡಿದರು ಹಿಂದೆ ಸರಿಯದ ಯುವಕರು ಚಿರೆತಯನ್ನು ಹಿಡಿದು ಹಗ್ಗದಲ್ಲಿ ಕಟ್ಟಿ ಹಾಕಿ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ. ಸದ್ಯ ಯುವಕರ ಈ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗಡಿಭಾಗದ ಯಾಚೇನಹಳ್ಳಿ ಬಳಿ ಯುವಕರು ಬರಿಗೈಯಲ್ಲಿ ಚಿರತೆಯನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ ಘಟನೆ ನಡೆದಿದೆ. ಆಗಾಗ ಗ್ರಾಮಕ್ಕೆ ಬಂದು ಉಪಟಳ ನೀಡುತ್ತಿದ್ದ ಚಿರತೆಯಿಂದ ಬೇಸತ್ತ ಯುವಕರು ಚಿರತೆಯನ್ನು ಹಿಡಿದು ಸಾಹಸ ಪ್ರದರ್ಶನ ಮಾಡಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಎಂದಿನಂತೆ ಆಹಾರ ಹುಡುಕುತ್ತಾ ಇಂದು ಕೂಡ ಗ್ರಾಮಕ್ಕೆ ಆಗಮಿಸಿದ್ದ ಚಿರತೆ, ನಾಯಿ ತಿನ್ನಲ್ಲು ಹೊಂಚು ಹಾಕಿತ್ತು. ಇದನ್ನು ಕಂಡ ಗ್ರಾಮದ ನಾಲ್ವರು ಯುವಕರು ಧೈರ್ಯ ಮಾಡಿ ಚಿರತೆಯನ್ನು ಹಿಡಿದಿದ್ದಾರೆ. ಸೆರೆ ವೇಳೆ, ಚಿರತೆ ಆಕ್ರಮಣ ಮಾಡಿದರೂ ಹಿಂದೆ ಸರಿಯದ ಯುವಕರು ಚಿರೆತಯನ್ನು ಹಿಡಿದು ಹಗ್ಗದಲ್ಲಿ ಕಟ್ಟಿ ಹಾಕಿ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ. ಸದ್ಯ ಯುವಕರ ಈ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ: ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಬಳಿ 4 ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ. ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದು, ನಿನ್ನೆ ತಡರಾತ್ರಿ ಚಿರತೆ ಸೆರೆಯಾಗಿದೆ. ಸದ್ಯ ಚಿರತೆಯನ್ನು ಅರಣ್ಯಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಸಿದ್ಧತೆ ನಡೆಸಿದ್ದಾರೆ.
ಮೈಸೂರಿನಲ್ಲಿ ಹೆಣ್ಣು ಚಿರತೆ ಸೆರೆ: ಫೆಬ್ರವರಿ 27ರ ಸುಮಾರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಹೊಸ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆಹಾರ ಅರಸಿ ನಾಡಿಗೆ ಬಂದಿದ್ದ ಹೆಣ್ಣು ಚಿರತೆಯೊಂದು ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೊನೆಗೂ ಚಿರತೆಯನ್ನು ಸೆರೆಹಿಡಿದಿದ್ದಾರೆ.
ಮೈಸೂರಿನಲ್ಲಿ 8 ವರ್ಷದ ಹೆಣ್ಣು ಹುಲಿ ಸೆರೆ: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬೇಗೂರು ಅರಣ್ಯ ಪ್ರದೇಶದಲ್ಲಿ, 8 ವರ್ಷದ ಹೆಣ್ಣು ಹುಲಿಯೊಂದು ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ಇದೇ ಮಾರ್ಚ್ 1 ರಂದು ಬೋನಿಗೆ ಬಿದ್ದಿತ್ತು, ಗಾಯಗೊಂಡ ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯದ ಚಾಮುಂಡಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು.
ಕೇರಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹುಲಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಾಣೂರು ಗ್ರಾಮದಲ್ಲಿ ಅದೇ ಹುಲಿಯನ್ನು ಸೆರೆಹಿಡಿಯಾಗಿದೆ. ಫೆಬ್ರವರಿ 25 ರಂದು ರಾಷ್ಟ್ರೀಯ ಹೆದ್ದಾರಿ ಬೇಗೂರು ಕಾಡಿನ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಹುಲಿಗಾಗಿ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದ್ದು, ನಂತರ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದ್ದು, ಬೋನಿನಲ್ಲಿ 8 ವರ್ಷದ ಹೆಣ್ಣು ಹುಲಿ ಬಂಧಿಯಾಗಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಹುಲಿಯ ಆತಂಕ ಹಲವೆಡೆ ಹೆಚ್ಚಾಗಿದ್ದು, ಬೆಳಗಾವಿಯಲ್ಲಿಯೂ ಕೂಡ ಇದಕ್ಕೆ ಹೊರತಾಗಿಲ್ಲ. ಖಾನಾಪುರ ತಾಲೂಕಿನ ಭೀಮಗಡ್ ಅರಣ್ಯ ವಲಯ ವ್ಯಾಪ್ತಿಯ ಹೆಮ್ಮಡಗಾ ಗ್ರಾಮದಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಇಲ್ಲಿ ಕಳೆದ ಆರು ತಿಂಗಳಲ್ಲಿ 30 ರಿಂದ 40 ಸಾಕು ಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಹೋಗಬೇಕೆಂದ್ರೆ ಕೈಯಲ್ಲಿ ದೊಣ್ಣೆ, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಬೋನಿಗೆ ಬಿತ್ತು 8 ವರ್ಷದ ಹೆಣ್ಣು ಹುಲಿ: ಆದರೆ ಜನರಲ್ಲಿ ಹೆಚ್ಚುತ್ತಿದೆ ಆತಂಕ
ಇದನ್ನೂ ಓದಿ: ಮೈಸೂರಿನ ಹೆಬ್ಬಲಗುಪ್ಪೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಚಿರತೆ ಕೊನೆಗೂ ಸೆರೆ..
Published On - 11:02 am, Wed, 10 March 21