ಲೋಕಸಭಾ ಪ್ರಚಾರ ಕಣದಲ್ಲಿ ಹೆಲಿಕಾಪ್ಟರ್ಗಳಿಗೆ ಹೆಚ್ಚಿದ ಬೇಡಿಕೆ: ಲಕ್ಷ ಲಕ್ಷ ಬಾಡಿಗೆ ಕೊಟ್ಟು ನಾಯಕರ ಸುತ್ತಾಟ
ಲೋಕಸಭೆ ಚುನಾವಣೆಗೆ ರಾಜಕೀಯ ನಾಯಕರು ಪ್ರಚಾರ ಅಭಿಯಾನ ಬಿರುಸುಗೊಳಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಾಡಿಗೆಯೂ ಹೆಚ್ಚಾಗಿದೆ. ರಾಜಕೀಯ ನಾಯಕರ ಹೆಲಿಕಾಪ್ಟರ್ಗಳಿಗೆ ವಿಧಿಸಲಾಗುವ ಬಾಡಿಗೆ ಸಂಬಂಧಿತ ಮಾಹಿತಿ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 2: ಲೋಕಸಭಾ ಚುನಾವಣಾ (Lok Sabha Elections) ಅಖಾಡ ರಂಗೇರುತ್ತಿದೆ. ರಾಜಕೀಯ ನಾಯಕರು ಜಿಲ್ಲೆ ಜಿಲ್ಲೆಗಳಲ್ಲೂ ಸುತ್ತಾಡಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಲ್ಲೂ, ಲಕ್ಷ ಲಕ್ಷ ಬಾಡಿಗೆ ಕೊಟ್ಟು ನಾಯಕರು ಹೆಲಿಕಾಪ್ಟರ್ಗಳಲ್ಲಿ (Helicopters) ಸವಾರಿ ಮಾಡುತ್ತಿದ್ದಾರೆ. ಮತಬೇಟೆಗೆ ಸುತ್ತಾಡುವ ನಾಯಕರಿಗಾಗಿ ನೂರಾರು ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಲಾಗಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಜನಾರ್ದನ ರೆಡ್ಡಿಯವರೂ ಅಷ್ಟೆ, ಬಳ್ಳಾರಿಗೆ ಹೋಗಲಿ, ಬೆಂಗಳೂರಿಗೆ ಬರಲಿ, ಅಕ್ಕಪಕ್ಕದ ಜಿಲ್ಲೆ, ಸಣ್ಣಪುಟ್ಟ ನಗರ, ಹಳ್ಳಿಗಳಿಗೂ ಹೆಲಿಕಾಪ್ಟರ್ನಲ್ಲೇ ಹೋಗುತ್ತಾರೆ. 15 ವರ್ಷದ ಹಿಂದೆಯೇ ತಮ್ಮದೇ ಹೆಲಿಕಾಪ್ಟರ್ಗಳಲ್ಲಿ ಸುತ್ತಾಡುತ್ತಾ, ರಾಜ್ಯ ರಾಜಕೀಯದಲ್ಲಿ ಜನಾರ್ದನ ರೆಡ್ಡಿ ಸದ್ದು ಮಾಡಿದ್ದರು. ಆದರೆ, ಅವರ ಬಂಧನದ ಬಳಿಕ ಅವರ ಹೆಲಿಕಾಪ್ಟರ್ಗಳು ಸೀಜ್ ಆಗಿದ್ದವು. ಇದೀಗ, ರಾಜಕೀಯ ರಂಗದಲ್ಲಿ ಮತ್ತೆ ತೊಡಗಿಸಿಕೊಂಡಿರುವ ರೆಡ್ಡಿ, ಮತ್ತೆ ಹೆಲಿಕಾಪ್ಟರ್ ಮೂಲಕ ಸುತ್ತಾಡುತ್ತಿದ್ದಾರೆ. ಸದ್ಯ ರೆಡ್ಡಿ ಮಾತ್ರವಲ್ಲ, ಅನೇಕರು ಹೆಲಿಕಾಪ್ಟರ್ ಮೊರೆ ಹೋಗಿದ್ದಾರೆ. ಹೀಗಾಗಿ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ.
ರಾಜ್ಯದಲ್ಲಿ ಸುಮಾರು 150 ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನ ಈಗಾಗಲೇ ಬುಕ್ ಆಗಿವೆ. ಹೆಲಿಕಾಪ್ಟರ್ಗಳ ಬಾಡಿಗೆ ದರದಲ್ಲಿ ಶೇ 20ರಿಂದ 30ರಷ್ಟು ಹೆಚ್ಚಾದರೂ, ತಲೆ ಕೆಡಿಸಿಕೊಳ್ಳದೆ ನಾಯಕರು ಸವಾರಿ ಮಾಡುತ್ತಿದ್ದಾರೆ.
ಎಷ್ಟಿದೆ ಹೆಲಿಕಾಪ್ಟರ್ಗಳ ಬಾಡಿಗೆ?
- 2 ಸೀಟ್ನ ಹೆಲಿಕಾಪ್ಟರ್ ಗಂಟೆಗೆ 2.10 ಲಕ್ಷ ರೂ.
- 4 ಆಸನದ ಹೆಲಿಕಾಪ್ಟರ್ ಗಂಟೆಗೆ 2.50 ಲಕ್ಷ ರೂ.
- 6 ಆಸನದ ಮಿನಿ ವಿಮಾನ ಗಂಟೆಗೆ 3 ಲಕ್ಷ ರೂ.
- 8 ಆಸನದ ಮಿನಿ ವಿಮಾನ ಗಂಟೆಗೆ 3.5 ಲಕ್ಷ ರೂ.
- 13 ಆಸನದ ಮಿನಿ ವಿಮಾನ ಗಂಟೆಗೆ 4 ಲಕ್ಷ ರೂ.
ಸ್ವಂತ ಹೆಲಿಕಾಪ್ಟರ್ ಹೊಂದಿರುವವರು ಯಾರೆಲ್ಲ?
ಬಹುತೇಕ ನಾಯಕರು ಬಾಡಿಗೆ ವಿಮಾನಗಳ ಮೊರೆ ಹೋಗಿದ್ದಾರೆ. ಜನಾರ್ದನ ರೆಡ್ಡಿ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಎಸ್ಎಸ್.ಮಲ್ಲಿಕಾರ್ಜುನ್, ರಘು ಆಚಾರ್, ಆನಂದ್ ಸಿಂಗ್ ಸೇರಿ ಕೆಲ ನಾಯಕರು ಸ್ವತಃ ಹೆಲಿಕಾಪ್ಟರ್ ಹೊಂದಿದ್ದಾರೆ. ತಮ್ಮ ಖಾಸಗಿ ಹೆಲಿಕಾಪ್ಟರ್ಗಳಲ್ಲೇ ನಾಯಕರ ಜತೆ ಸುತ್ತಾಡುತ್ತಿದ್ದಾರೆ. ಆಕಾಶದಲ್ಲಿ ಹಾರಾಡುತ್ತಲೇ ರಣತಂತ್ರ ಹೆಣೆಯುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ‘ಅಸಮಾಧಾನ’ದ ಕಂಟಕ; ಅಖಾಡಕ್ಕಿಳಿದ ಚಾಣಕ್ಯ ಅಮಿತ್ ಶಾ
ಎಲೆಕ್ಟ್ರಿಕ್ ವಸ್ತು, ದಿನಸಿ, ಬಟ್ಟೆ ವ್ಯಾಪಾರದ ಮೇಲೂ ನಿಗಾ
ಇನ್ನು, ಚುನಾವಣಾ ಅಖಾಡದಲ್ಲಿ ಮತದಾರರನ್ನು ಸೆಳೆಯಲು ನಾನಾ ರೀತಿ ಆಮಿಷವೊಡ್ಡಲಾಗುತ್ತಿದೆ. ಹೀಗಾಗಿ ಮದ್ಯ, ಕುಕ್ಕರ್, ಹೆಲ್ಮೆಟ್, ಟಿವಿ, ಮಿಕ್ಸಿ, ನಗದು, ಸೀರೆ, ಬಟ್ಟೆಗಳು, ದಿನಸಿ ಕಿಟ್ ವ್ಯಾಪರದ ಮೇಲೆ ರಾಜ್ಯ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಯುಗಾದಿ ಹಬ್ಬದ ನೆಪದಲ್ಲಿ ಜನರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯದಲ್ಲಿ ಹೆಚ್ಚಾಗಿ ವ್ಯಾಪಾರ ಬೆಂಗಳೂರಿನ ಚಿಕ್ಕಪೇಟೆ, ಮಾರ್ಕೆಟ್ ಸೇರಿದಂತೆ ಹಲವು ವ್ಯಾಪಾರ ಪ್ರದೇಶಗಳ ಅಂಗಡಿಗಳ ವ್ಯಾಪಾರ ವಹಿವಾಟಿನ ಮೇಲೆ ನಿಗಾ ಇರಿಸಲಾಗಿದೆ.
ವರದಿ: ವಿನಯ್ಕುಮಾರ್ ಕಾಶಪ್ಪನವರ್, ಕಿರಣ್ ಸೂರ್ಯ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ