ಲಂಡನ್: ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ಮಾರಕ ದಶಮಾನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮತ್ತೆ ಪ್ರಧಾನಿ ಮೋದಿ ನಮನ ಸಲ್ಲಿಸುವ ಸಾಧ್ಯತೆ ಇದೆ. ಹೌದು, ಮುಂದಿನ ವರ್ಷ ನಡೆಯಲಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ಮಾರಕ ದಶಮಾನೋತ್ಸವಕ್ಕೆ ಬಿಜೆಪಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮೂಲಕ ಪ್ರಧಾನಿ ಮೋದಿಗೆ ಆಹ್ವಾನ ಕಳುಹಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 14: ಲಂಡನ್ನಲ್ಲಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ಮಾರಕ ದಶಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲು ಸಂಸ್ಥೆ ಚಿಂತನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಹಿರಿಯ ಬಿಜೆಪಿ ನಾಯಕ, ಸಂಸದ ಬಸವರಾಜ ಬೊಮ್ಮಾಯಿ ಮೂಲಕ ಮೋದಿ ಅವರಿಗೆ ಆಹ್ವಾನ ನೀಡಲು ಸಂಸ್ಥೆ ಉದ್ದೇಶಿಸಿದೆ ಎಂಬುದು ತಿಳಿದುಬಂದಿದೆ.
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ಮಾರಕ ಸಂಸ್ಥೆ ಆಹ್ವಾನದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಸದ್ಯ ಕುಟುಂಬ ಸಮೇತ ಲಂಡನ್ಗೆ ಭೇಟಿ ನೀಡಿದ್ದಾರೆ. ಲಂಡನ್ನಲ್ಲಿರುವ ಬಸವೇಶ್ವರ ಮೂರ್ತಿಗೆ ನಮನ ಸಲ್ಲಿಸಿದ್ದಾರೆ.
ಇದೇ ವೇಳೆ, ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ಮಾರಕ ದಶಮಾನೋತ್ಸವ ಆಚರಣೆ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಫೌಂಡೇಶನ್ ನಿರ್ಧರಿಸಿದೆ. ಈ ಬಗ್ಗೆ ಬೊಮ್ಮಾಯಿ ಬಳಿ ಆಹ್ವಾನ ಪತ್ರ ನೀಡಿದೆ. ಪ್ರಧಾನಮಂತ್ರಿಗಳಿಗೆ ಆಹ್ವಾನ ಪತ್ರ ಹಸ್ತಾಂತರಿಸಲು ಬೊಮ್ಮಾಯಿಗೆ ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ. ಲಂಡನ್ನಲ್ಲಿರುವ ಬಸವೇಶ್ವರ ಪ್ರತಿಮೆಗೆ ನಮನ ಸಲ್ಲಿಸಿದ ಬಗ್ಗೆ ಬಸವರಾಜ ಬೊಮ್ಮಾಯಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದ್ದಾರೆ.
‘‘ಜಗದಗಲ ಮುಗಿಲಗಲ ಪಸರಿಸಿರುವ ಬಸವಪ್ರಭುವಿಗೆ ನನ್ನ ಶರಣು ಶರಣಾರ್ಥಿ’’ ಎಂದು ಉಲ್ಲೇಖಿಸಿರುವ ಅವರು, ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲೆ ವಿರಾಜಮಾನವಾಗಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಯು.ಕೆ ಕನ್ನಡಿಗರ ಸಂಘದ ಪದಾಧಿಕಾರಿಗಳೊಂದಿಗೆ ಗೌರವ ಸಲ್ಲಿಸಿದೆ. ಕಾಯಕವೇ ಕೈಲಾಸ ಸೇರಿದಂತೆ ಭಕ್ತಿ ಭಂಡಾರಿ ಬಸವಣ್ಣನವರ ಆಶಯಗಳು ಅಂದು ಇಂದು ಹಾಗೂ ಎಂದೆಂದಿಗೂ ನಮಗೆ ದಾರಿದೀಪವಾಗಿವೆ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಎಕ್ಸ್ ಸಂದೇಶ
“ಜಗದಗಲ ಮುಗಿಲಗಲ ಪಸರಿಸಿರುವ ಬಸವಪ್ರಭುವಿಗೆ ನನ್ನ ಶರಣು ಶರಣಾರ್ಥಿ”
ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲೆ ವಿರಾಜಮಾನವಾಗಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಯು.ಕೆ ಕನ್ನಡಿಗರ ಸಂಘದ ಪದಾಧಿಕಾರಿಗಳೊಂದಿಗೆ ಗೌರವ ಸಲ್ಲಿಸಿದೆ.
ಕಾಯಕವೇ ಕೈಲಾಸ ಸೇರಿದಂತೆ ಭಕ್ತಿ ಭಂಡಾರಿ ಬಸವಣ್ಣನವರ ಆಶಯಗಳು ಅಂದು ಇಂದು ಹಾಗೂ ಎಂದೆಂದಿಗೂ ನಮಗೆ… pic.twitter.com/zgJbIIaeKw
— Basavaraj S Bommai (@BSBommai) September 14, 2024
2015ರಲ್ಲಿ ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಇದೀಗ ಹತ್ತನೇ ವರ್ಷ ಪ್ರಧಾನಿ ಭೇಟಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಗಾಲ್ವಾನ್ ಕಣಿವೆ ಸೇರಿದಂತೆ 4 ಸ್ಥಳಗಳಿಂದ ಚೀನಾ ಪಡೆ ಹಿಂದಕ್ಕೆ, ಜೈಶಂಕರ್, ಅಜಿತ್ ದೋವಲ್ ಮಾತುಕತೆ ಯಶಸ್ವಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Sat, 14 September 24