ನಿಂತಿದ್ದ ಕ್ಯಾಂಟರ್ಗೆ ಲಾರಿ ಡಿಕ್ಕಿಯಾಗಿ ನಾಲ್ವರ ದುರ್ಮರಣ, ಹಾಯ್ದ ಚಿಂದಿ ಹಂಚಿಕೊಳ್ಳುವ ವಿಚಾರಕ್ಕೆ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್
ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಿಸುತ್ತಿದ್ದ ಕ್ಯಾಂಟರ್ ಟೈರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ನಾಲ್ವರು ಕ್ಯಾಂಟರ್ ರಸ್ತೆಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದರು. ಈ ವೇಳೆ ಟ್ಯಾಂಕರ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ.
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ದೊಡ್ಡಸಿದ್ದವ್ವನಹಳ್ಳಿ ಬಳಿ ರಾ.ಹೆ.40ರಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಿಸುತ್ತಿದ್ದ ಕ್ಯಾಂಟರ್ ಟೈರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ನಾಲ್ವರು ಕ್ಯಾಂಟರ್ ರಸ್ತೆಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದರು. ಈ ವೇಳೆ ಟ್ಯಾಂಕರ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ. ರಾಯಚೂರಿನ ಹುಲುಗಪ್ಪ, ಕುಷ್ಟಗಿಯ ಮಂಜುನಾಥ್, ವಿಜಯಪುರದ ಸಂಜಯ್, ರೋಣದ ಶರಣಪ್ಪ ಮೃತರು. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
KSRTC ಬಸ್ ಪಲ್ಟಿಯಾಗಿ 15ಕ್ಕೂ ಜನರಿಗೆ ಗಾಯ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಯತ್ಲಾಸಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಲಬುರಗಿ ಜಿಲ್ಲೆಯ ಸೇಡಂ ಡಿಪೋಗೆ ಸೇರಿದ KSRTC ಬಸ್ ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ಗೆ ಹೊರಟಿತ್ತು. ಈ ವೇಳೆ ಲೋಕಪಲ್ಲಿ ಬಳಿ ಕ್ರಾಸಿಂಗ್ ಇದ್ರೂ ವೇಗವಾಗಿ ಬಸ್ ಓಡಿಸಿದ ಪರಿಣಾಮ ಬಸ್ ಪಲ್ಟಿಯಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಘಟನೆಯಲ್ಲಿ 15 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಿಸಿಯೂಟ ಆಹಾರ ಸಾಮಗ್ರಿ ಸಾಗಿಸುತ್ತಿದ್ದ ಲಾರಿ ಪಲ್ಟಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ರಸ್ತೆ ಬಳಿ ಲಾರಿ ಪಲ್ಟಿಯಾಗಿ ಆಹಾರ ಸಾಮಗ್ರಿ ಚೆಲ್ಲಾಪಿಲ್ಲಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ ದಾಖಲಿಸದೆ ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿತ ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ ಆರೋಪ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರ ವಿರುದ್ಧ ಕೇಳಿ ಬಂದಿದೆ. ಸಬ್‌ಇನ್ಸ್‌ಪೆಕ್ಟರ್ ಹರೀಶ್, ಇತರೆ ಪೊಲೀಸರು ಹಣಕಾಸು ವಿಚಾರವಾಗಿ ವ್ಯಕ್ತಿಯನ್ನು ಠಾಣೆಗೆ ಕರೆತಂದು ಥಳಿಸಿದ ಆರೋಪ ಕೇಳಿ ಬಂದಿದೆ. ಹಳೇಗುಡ್ಡದಹಳ್ಳಿ ನಿವಾಸಿ ತೌಸಿಫ್ ಪಾಷಾ(22)ಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಾಳು ತೌಸಿಫ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾಯ್ದ ಚಿಂದಿ ಹಂಚಿಕೊಳ್ಳುವ ವಿಚಾರಕ್ಕೆ ಕೊಲೆ ಇನ್ನು ಮೈಸೂರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಶಿಕುಮಾರ್ ಅಲಿಯಾಸ್ ಕೆಂಚ, ರಾಮಲಿಂಗುನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಕರಣವನ್ನು ಭೇದಿಸಿದ ಕೆ.ಆರ್.ಠಾಣೆ ಪೊಲೀಸರು ಪರಾರಿಯಾದ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಹಾಯ್ದ ಚಿಂದಿ ಹಂಚಿಕೊಳ್ಳುವ ವಿಚಾರವಾಗಿ ಚಂದ್ರುನನ್ನು ಮೂವರು ಆರೋಪಿಗಳು ಹತ್ಯೆಗೈದಿದ್ದರು. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
Published On - 7:59 am, Sat, 4 December 21