ಕರ್ನಾಟಕದಾದ್ಯಂತ ಸಿಲಿಂಡರ್ ಕೊರತೆ: ಕಾಳಸಂತೆಯಲ್ಲಿ ಗ್ಯಾಸ್ ದಂಧೆ, 1 ಸಿಲಿಂಡರ್ ದರ 7 ಸಾವಿರ ರೂ!

ಕರ್ನಾಟಕದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ತೀವ್ರ ಕೊರತೆ ಎದುರಾಗಿದ್ದು, ಹೋಟೆಲ್‌ಗಳು ಸಂಕಷ್ಟದಲ್ಲಿವೆ. ಕಾಳಸಂತೆಯಲ್ಲಿ ಒಂದು ಸಿಲಿಂಡರ್ 7000 ರೂ.ಗೆ ಮಾರಾಟವಾಗುತ್ತಿರುವುದು ತಿಳಿದುಬಂದಿದೆ. ಹೋಟೆಲ್‌ಗಳು ಬೆಲೆ ಏರಿಕೆ ಮಾಡುತ್ತಿದ್ದು, ಕೆಲವು ಮುಚ್ಚಿವೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿರುವುದರ ವಿರುದ್ಧ ಆಹಾರ ಇಲಾಖೆ ಕಠಿಣ ಎಚ್ಚರಿಕೆ ನೀಡಿದ್ದು, ಹಲವೆಡೆ ದಾಳಿಗಳನ್ನೂ ನಡೆಸಿದೆ.

ಕರ್ನಾಟಕದಾದ್ಯಂತ ಸಿಲಿಂಡರ್ ಕೊರತೆ: ಕಾಳಸಂತೆಯಲ್ಲಿ ಗ್ಯಾಸ್ ದಂಧೆ, 1 ಸಿಲಿಂಡರ್ ದರ 7 ಸಾವಿರ ರೂ!
ಸಾಂದರ್ಭಿಕ ಚಿತ್ರ

Updated on: Mar 15, 2026 | 7:26 AM

ಬೆಂಗಳೂರು,ಮಾರ್ಚ್ 15: ಕರ್ನಾಟಕದಲ್ಲಿ (Karnataka) ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG) ಕೊರತೆ ತೀವ್ರವಾಗುತ್ತಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಒಂದೇ ಒಂದು ಮಿಸ್ಡ್ ಕಾಲ್‌ಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್‌ಗಾಗಿ ಈಗ ಹೋಟೆಲ್ ಮಾಲೀಕರು ಪರದಾಡುವಂತ ಸ್ಥಿತಿ ಎದುರಾಗಿದೆ. ಈ ಕೊರತೆಯನ್ನು ಕೆಲವು ದಂಧೆಕೋರರು ದುರುಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ 1,900 ರೂಪಾಯಿ ಬೆಲೆಯ ವಾಣಿಜ್ಯ ಸಿಲಿಂಡರ್ ಅನ್ನು ಕಾಳಸಂತೆಯಲ್ಲಿ ಸುಮಾರು 7 ಸಾವಿರ ರೂಪಾಯಿಗೆ ಮಾರಲಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ. ಮೀನಾಕ್ಷಿ ಕಾಫಿ ಬಾರ್ ಮಾಲೀಕ ಸುನೀಲ್ ಮಾತನಾಡಿ, ಇದು ಕೃತಕ ಅಭಾವ ಸೃಷ್ಟಿಸಿ ನಡೆಯುತ್ತಿರುವ ದಂಧೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಮೈಸೂರಿನಲ್ಲೂ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಸಿಲಿಂಡರ್‌ಗೆ 4 ರಿಂದ 5 ಸಾವಿರ ರೂಪಾಯಿ ವರೆಗೆ ಹಣ ಪಡೆದು ಮಾರಾಟ ಮಾಡಲಾಗುತ್ತಿದೆ ಎಂದು ಕೆಲ ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಬೆಂಗಳೂರು ಹೋಟೆಲ್​​ಗಳಲ್ಲಿ ತಿಂಡಿ ದರ ಹೆಚ್ಚಳ

ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೀಡಾದ ಹೋಟೆಲ್ ಮಾಲೀಕರು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಬೆಂಗಳೂರು ಕಫೆಯಲ್ಲಿ ಉಪಾಹಾರಗಳ ಬೆಲೆಯನ್ನು 10 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಲಾಲ್‌ಬಾಗ್ ರಸ್ತೆಯಲ್ಲಿರುವ ಸತ್ಕಾರ್ ಹೋಟೆಲ್‌ನಲ್ಲಿ ಗ್ಯಾಸ್ ಕೊರತೆಯಿಂದ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಜೊತೆಗೆ ಊಟ ಮತ್ತು ತಿಂಡಿಗಳ ಬೆಲೆಯನ್ನೂ 5 ರಿಂದ 20 ರೂಪಾಯಿ ತನಕ ಹೆಚ್ಚಿಸಲಾಗಿದೆ.

ಗೃಹ ಬಳಕೆಯ ಎಲ್​ಪಿಜಿ ವಾಣಿಜ್ಯ ಉದ್ದೇಶಕ್ಕೆ ಬಳಕೆ: ಹಲವೆಡೆ ದಾಳಿ

ಇನ್ನೂ ಕೆಲವು ಕಡೆ ವಾಣಿಜ್ಯ ಸಿಲಿಂಡರ್ ಸಿಗದ ಕಾರಣ ಗೃಹಬಳಕೆಯ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯಾದ್ಯಂತ ದಾಳಿ ನಡೆಸಿ ಹಲವು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿಯಲ್ಲಿ 46 ಮತ್ತು ದಾವಣಗೆರೆಯಲ್ಲಿ 13 ಸಿಲಿಂಡರ್ ಸೇರಿ ಒಟ್ಟು 316 ಸಿಲಿಂಡರ್‌ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯಂತೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ 20 ಶೇಕಡಾವರೆಗೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣದ ಕ್ಯಾಂಟೀನ್‌ಗಳು, ದೇವಸ್ಥಾನಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಬೆಂಗಳೂರಿನ ಹಲವು ಹೋಟೆಲ್​ಗಳು ಬಂದ್

ಸಿಲಿಂಡರ್ ಕೊರತೆಯಿಂದ ಕೆಲವು ಹೋಟೆಲ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಿಸಿದೆ. ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನಲ್ಲಿರುವ ಕೃಷ್ಣಸಾಗರ್ ಹೋಟೆಲ್, ಶೇಷಾದ್ರಿಪುರಂನ ಹೋಟೆಲ್ ಸನ್ಮಾನ್ ಮತ್ತು ಬಸವನಗುಡಿಯ ಬೈಟು ಕಾಫಿ ಹೋಟೆಲ್ ತಾತ್ಕಾಲಿಕವಾಗಿ ಬಂದ್ ಆಗಿವೆ.

ಆದರೆ ಕೆಲ ಹೋಟೆಲ್ ಮಾಲೀಕರು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ. ಶಿವಮೊಗ್ಗದ ದುರ್ಗಿಗುಡಿಯಲ್ಲಿ ಇರುವ ಶುಭಂ ಹೋಟೆಲ್‌ನಲ್ಲಿ ಇದ್ದಿಲು ಬಳಸಿ ಅಡುಗೆ ಮಾಡಲಾಗುತ್ತಿದೆ. ಚಿತ್ರದುರ್ಗದ ಕೆಲವು ಹೋಟೆಲ್‌ಗಳಲ್ಲಿ ಆಧುನಿಕ ಒಲೆಗಳನ್ನು ಬಳಸಿ ಅಡುಗೆ ಸಿದ್ಧಪಡಿಸಲಾಗುತ್ತಿದೆ.

ಇನ್ನೂ ಕಲಬುರಗಿಯ ಶರಣಬಸವೇಶ್ವರ ಮಠದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ನೀಡಲಾಗುತ್ತಿದ್ದ ದಾಸೋಹಕ್ಕೂ ಸಿಲಿಂಡರ್ ಕೊರತೆಯ ಪರಿಣಾಮ ತಟ್ಟಿದೆ. ಸದ್ಯ ಮಠದಲ್ಲಿ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲೂ ಪ್ರಸಾದ ಸಿದ್ಧಪಡಿಸಲು ಸೌದೆ ಒಲೆ ಬಳಸಲಾಗುತ್ತಿದೆ.

ಸಿಲಿಂಡರ್ ಬುಕ್ ಮಾಡುವಾಗ ಸೈಬರ್ ವಂಚಕರ ಬಗ್ಗೆ ಎಚ್ಚರ

ಇದೇ ಸಂದರ್ಭದಲ್ಲಿ ಸೈಬರ್ ವಂಚಕರು ಕೂಡ ಜನರ ಸಂಕಷ್ಟವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ‘ನಿಮ್ಮ ಹೆಸರಲ್ಲಿ ಗ್ಯಾಸ್ ಬುಕ್ ಆಗಿದೆ’ ಎಂಬಂತೆ ಕಳ್ಳ ಲಿಂಕ್‌ಗಳನ್ನು ಕಳುಹಿಸಿ ವಂಚಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

ಅಡುಗೆ ಎಣ್ಣೆ ದರವೂ ಏರಿಕೆ

ಇನ್ನೊಂದೆಡೆ ಯುದ್ಧದ ಪರಿಣಾಮವಾಗಿ ಕೇವಲ ಗ್ಯಾಸ್ ಸಿಲಿಂಡರ್ ಮಾತ್ರವಲ್ಲ, ಅಡುಗೆ ಎಣ್ಣೆಯ ದರವೂ ಏರಿಕೆಯಾಗಿದೆ. 15 ಕೆಜಿ ಟಿನ್‌ಗೆ ಸುಮಾರು 150 ರೂಪಾಯಿ ಮತ್ತು ಲೀಟರ್‌ಗೆ 10 ರಿಂದ 15 ರೂಪಾಯಿ ತನಕ ಏರಿಕೆಯಾಗಿದೆ. ಆದರೆ ಮೊಟ್ಟೆಗಳ ರಫ್ತು ಕಡಿಮೆಯಾಗಿರುವ ಕಾರಣ ಅವುಗಳ ಬೆಲೆ ಇಳಿಕೆಯಾಗಿದೆ. ಮೊದಲು 6 ರಿಂದ 7 ರೂಪಾಯಿ ಇದ್ದ ಮೊಟ್ಟೆ ಈಗ 3 ರಿಂದ 4 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಒಟ್ಟಾರೆ ಗ್ಯಾಸ್ ಕೊರತೆ ಮತ್ತು ಬೆಲೆ ಏರಿಕೆಯ ಪರಿಣಾಮ ರಾಜ್ಯದ ಹೋಟೆಲ್ ಉದ್ಯಮ ಹಾಗೂ ಗ್ರಾಹಕರ ಮೇಲೆ ದೊಡ್ಡ ಹೊರೆ ಬಿದ್ದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us