ರಾಮಕೃಷ್ಣರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆಹಿಡಿದ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ
ಕುಂದಾಪುರದ ಪ್ರಾಂಶುಪಾಲರೊಬ್ಬರಿಗೆ ನೀಡಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ. ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿ ತಡೆದಿದ್ದಕ್ಕಾಗಿ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ ಎಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಇದೀಗ ಇದಕ್ಕೆ ಸ್ವತಃ ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.
ಉಡುಪಿ, (ಸೆಪ್ಟೆಂವರ್ 5): ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಿದೆ. ಇದರಲ್ಲಿ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೂ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಆದರೆ, ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿಯೇ ತಡೆದಿದ್ದು ಇವರೇ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಇವರಿಗೆ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇನ್ನು ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಈ ಹಿಂದಿನ ಸರ್ಕಾರ ಆದೇಶ ಮಾಡಿದಾಗ ಪ್ರಿನ್ಸಿಪಾಲ್ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ. ಪ್ರಶಸ್ತಿ ಕ್ಯಾನ್ಸಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಈ ಹಿಂದಿನ ಸರ್ಕಾರ ಆದೇಶ ಮಾಡಿದಾಗ ಪ್ರಿನ್ಸಿಪಾಲ್ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ, ಪ್ರಶಸ್ತಿ ರದ್ದು ಮಾಡಿಲ್ಲ. ವಿದ್ಯಾರ್ಥಿಗಳ ಜೊತೆ ಪ್ರಿನ್ಸಿಪಾಲ್ ರಾಮಕೃಷ್ಣ ವರ್ತನೆ ಸರಿಯಿರಲಿಲ್ಲ. ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ. ಆ ಭಾಗದಲ್ಲಿ ರಾಜಕಾರಣ ಮಾಡುತ್ತಾರೆ. ಅದು ಮಾಡೋದು ಬೇಡ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಛಲವಾದಿ ನಾರಾಯಣಸ್ವಾಮಿ ಹೇಳುವುದೇನು?
ರಾಮಕೃಷ್ಣಗೆ ಘೋಷಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ವಿಚಾರದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಯಾರೋ ದೂರು ಕೊಟ್ಟಿದ್ದಾರೆ ಎಂದು ಪ್ರಶಸ್ತಿಗೆ ತಡೆ ನೀಡಿದ್ದಾರೆ. ಅಲ್ಲಿಗೆ ಹಿಜಾಬ್ ಬಗ್ಗೆ ಮಾತಾಡಿದ್ರೆ ಉತ್ತಮ ಅಂತಾ ಅಲ್ಲ. ಇದು ಸರ್ಕಾರ ನಡೆದುಕೊಳ್ಳೋ ರೀತಿನಾ? ಇದು ಡಬಲ್ ಸ್ಟಾಂಡರ್ಡ್ ಧೋರಣೆ. ಈ ರೀತಿಯ ಕಾರ್ಯದಲ್ಲಿ ಸರ್ಕಾರಗಳು ತೊಡಗಬಹುದೇ? ರಾಜ್ಯ ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಬೇಕು. ಇದರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚು ಬೆಳೆಯುತ್ತವೆ. ಇದನ್ನ ದೊಡ್ಡದು ಮಾಡಬೇಡಿ, ಶಾಲೆ ಪವಿತ್ರವಾಗಿರಲು ಬಿಡಿ ಎಂದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಿಷ್ಟು
ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆಹಿಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ‘ಹಿಜಾಬ್ ವಿವಾದ ಸಂದರ್ಭದಲ್ಲಿ ಗೇಟಿನಲ್ಲಿ ವಿದ್ಯಾರ್ಥಿನಿಯರನ್ನು ರಾಮಕೃಷ್ಣ ಜಿಬಿ ಅವರು ತಡೆದಿದ್ದರು. ಇದು ಸರ್ಕಾರವೇ ನೀಡಿದ್ದ ಆದೇಶವಾಗಿತ್ತು. ಆದರೆ, ಈ ಆರೋಪ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರಾಂಶುಪಾಲರ ಸಾಧನೆಗಾಗಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಯಾರ ಮೂಲಕ ಒತ್ತಡ ತಂದು ಪ್ರಶಸ್ತಿ ಪಡೆದಿರಲಿಲ್ಲ. ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡದೆ ಪ್ರಶಸ್ತಿ ಪಡೆದಿದ್ದರು. ಅನುಭವದ ಆಧಾರದಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಈಗ ಸರಕಾರ ಅಗೌರವ ಮೊಂಡುತನ ತೋರಿಸಿದೆ. ಇದು ಶಿಕ್ಷಕ ವೃತ್ತಿಗೆ ಮಾಡಿದ ಅವಮಾನ, ಅನ್ಯಾಯ. ಆಯ್ಕೆಯಾದ ನಂತರ ಹಿಂಪಡೆದಿರುವುದು ಸರಿಯಲ್ಲ ಎಂದಿದ್ದಾರೆ.
ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು ಸರಕಾರ ಮುಂದಾಗಿದೆ. ಉಡುಪಿ ಜಿಲ್ಲೆಯ ಜನರ ತಾಳ್ಮೆಯನ್ನು ಸಿದ್ದರಾಮಯ್ಯ ಸರಕಾರ ಪರೀಕ್ಷೆ ಮಾಡುತ್ತಿದೆ. ಜೇನುಗೂಡಿಗೆ ಮತ್ತೊಮ್ಮೆ ಸರ್ಕಾರ ಕೈ ಹಾಕಿದೆ. ರಾಮಕೃಷ್ಣ ಅವರು ಆ ಭಾಗದ ವಿದ್ಯಾರ್ಥಿಗಳ ಮನಸ್ಸು ಗೆದ್ದವರು. ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕ ಕರ್ತವ್ಯ ಮಾಡಿದವರು. ಹಿಜಾಬ್ ಸಂದರ್ಭದಲ್ಲಿ ಅವರ ಕರ್ತವ್ಯ ಮಾಡಿದ್ದಾರಷ್ಟೇ. ಸರ್ಕಾರ ಸೂಚಿಸಿದ ನಿಯಮಾವಳಿ ಪಾಲಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಕ್ರಮ ಕೈಗೊಂಡಿದ್ದರು. ಶಾಲೆಯ ಶಿಸ್ತನ್ನು ಕಾಪಾಡಿದ್ದಕ್ಕೆ ಅವಮಾನ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.