ಸುಮಲತಾ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್; ಈ ವೇಳೆ ಘಟಾನುಘಟಿ ನಾಯಕರು ಹಾಜರು!

| Updated By: ರಮೇಶ್ ಬಿ. ಜವಳಗೇರಾ

Updated on: Apr 04, 2024 | 5:40 PM

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದು, ಇದೀಗ ಅವರು ಬಿಜೆಪಿ ಸೇರ್ಪಡೆಗೆ ಮುಹೂರ್ತ ಸಹ ನಿಗದಿಯಾಗಿದೆ. ಹಾಗಾದ್ರೆ, ಸುಮಲತಾ ಅಂಬರೀಶ್ ಅವರು ಯಾವಾಗ ಬಿಜೆಪಿ ಸೇರ್ಪಡೆಯಾಗುತ್ತಾರೆ? ಈ ವೇಳೆ ಯಾರೆಲ್ಲ ಇರಲಿದ್ದಾರೆ ಎನ್ನುವ ವಿವರ ಇಲ್ಲಿದೆ.

ಸುಮಲತಾ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್; ಈ ವೇಳೆ ಘಟಾನುಘಟಿ ನಾಯಕರು ಹಾಜರು!
ಸುಮಲತಾ ಅಂಬರೀಶ್
Follow us on

ಬೆಂಗಳೂರು, (ಏಪ್ರಿಲ್ 04): ಮಂಡ್ಯ (Mandya) ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಬಿಜೆಪಿ (BJP) ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದರೆ ಏಪ್ರಿಲ್ 05ರಂದು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯುವ ಪಕ್ಷ ಸೇರ್ಪಡೆ ಕಾರ್ಯಕ್ರದಲ್ಲಿ ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ, ಆರ್.‌ ಅಶೋಕ್‌, ಮಾಜಿ ಸಿಎಂ ಬಿ.ಎಸ್‌. ಬಿ.ಎಸ್.‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇನ್ನು ಇದೇ ವೇಳೆ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಸಹ ಬಿಜೆಪಿ ಸೇರಲಿದ್ದಾರೆ.

ಸುಮಲತಾ ಅಂಬರೀಶ್‌ ಅವರು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು, ಬಿಜೆಪಿ ಸೇರ್ಪಡೆಯಾಗುವುದಾಗಿ ನಿನ್ನೆ ಅಷ್ಟೇ ಘೋಷಣೆ ಮಾಡಿದ್ದರು. ಆದ್ರೆ, ಯಾವಾಗ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ದಿನಾಂಕ ಹೇಳಿರಲಿಲ್ಲ. ಈ ಈಗ ಅವರ ಪಕ್ಷ ಸೇರ್ಪಡೆ ದಿನಾಂಕವೂ ನಿಗದಿಯಾಗಿದೆ. ನಾಳೆ (ಶುಕ್ರವಾರ) ಬೆಳಗ್ಗೆ 11.30ಕ್ಕೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಯನ್ನು ಸೇರಲಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾರಾ ದರ್ಶನ್?‌ ಸುಮಲತಾ ಹೇಳಿದ್ದಿಷ್ಟು

ಇನ್ನು ಬಿಜೆಪಿ ಸೇರ್ಪಡೆ ಬಗ್ಗೆ ಸ್ವತಃ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ 5 ಏಪ್ರಿಲ್ 2024ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವೆ. ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳ, ಡಾ.ಅಂಬರೀಶ್ ಅವರ ಅಭಿಮಾನಿಗಳ ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು ನನ್ನ ಸವಿನಯ ಕೋರಿಕೆ ಎಮದು ಬರೆದುಕೊಂಡಿದ್ದಾರೆ.


ಸುಮಲತಾ ಅಂಬರೀಶ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದ್ರೆ, ಈ ಬಾರಿ ಮತ್ತೆ ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಮಂಡ್ಯ ಟಿಕೆಟ್​ಗಾಗಿ ಭಾರೀ ಕಸರತ್ತು ಮಾಡಿದ್ದರು. ಆದ್ರೆ, ಬಿಜೆಪಿ ಹೈಕಮಾಂಡ್ ಅಂತಿಮವಾಗಿ​ ಮಂಡ್ಯ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ, ಇದರಿಂದ ಸುಮಲತಾ ಅಂಬರೀಶ್ ಅವರು ನಿರಾಸೆಗೊಂಡು ಮೌನಕ್ಕೆ ಶರಣಾಗಿದ್ದರು.  ಬಳಿಕ ಸುಮಲತಾ ಅಂಬರೀಶ್ ಅವರು ತಮ್ಮ ಬೆಂಬಲಿಗರ ಅಭಿಪ್ರಾಯ ಪಡೆದು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡರು. ಅಲ್ಲದೇ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ನಾಳೆ ಅಧಿಕೃತವಾಗಿ ಸುಮಲತಾ ಕಮಲ ಮುಡಿಯಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Thu, 4 April 24