ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾರಾ ದರ್ಶನ್? ಸುಮಲತಾ ಹೇಳಿದ್ದಿಷ್ಟು
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ರಾಜಕೀಯ ಮುಂದಿನ ನಡೆಯನ್ನು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ಗೆ ಹೋಗುವುದಿಲ್ಲ. ಪಕ್ಷೇರತವಾಗಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಬಿಜೆಪಿ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅದರಂತೆ ಈ ವಾರದಲ್ಲೇ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇನ್ನು ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಅವರು ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾರಾ? ಇನ್ನು ಸುಮಲತಾ ಅವರು ಎಚ್‌ಡಿಕೆ ಪರ ಪ್ರಚಾರಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆಗೆ ಅವರೇ ಉತ್ತರಿಸಿದ್ದು, ಅದು ಈ ಕೆಳಗಿನಂತಿದೆ.
ಮಂಡ್ಯ, (ಏಪ್ರಿಲ್ 03): ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್(Sulamatha Ambareesh) ಅವರು ಕೊನೆಗೂ ಬಿಜೆಪಿ(BJP) ಸೇರುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇಂದು (ಏಪ್ರಿಲ್ 03) ಮಂಡ್ಯದಲ್ಲಿ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸುಮಲತಾ, ತಮ್ಮ ಅವಧಿಯಲ್ಲಿನ ಕಾರ್ಯ ಸಾಧನೆಗಳನ್ನು ಬಿಚ್ಚಿಟ್ಟರು. ಕೊನೆಗೆ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆನ್ನಿಗೆ ನಿಂತು ಪ್ರಚಾರ ಮಾಡಿದ್ದ, ಈಗ ಘೋಷಣೆ ಮಾಡುವಾಗಲೂ ಜತೆಗೇ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಜೆಪಿ ಅಥವಾ ಎಚ್.ಡಿ. ಕುಮಾರಸ್ವಾಮಿ ಪರ ಮತ ಕೇಳಲಿದ್ದಾರೆಯೇ ಎಂಬ ಪ್ರಶ್ನೆಗೆ ಅವರನ್ನೇ ಕೇಳಬೇಕು ಎಂದು ಉತ್ತರಿಸಿದ್ದಾರೆ.
ದರ್ಶನ್ ಅವರಾಗಲೀ, ಯಶ್ ಅವರಾಗಲೀ ಕಳೆದ ಬಾರಿ ಚುನಾವಣೆಗೆ ನನ್ನ ಬೆನ್ನ ಹಿಂದೆ ನಿಂತು ಕೆಲಸ ಮಾಡಿದರು. ಅವರ ಎಲ್ಲ ಕೆಲಸಗಳನ್ನು ಬದಿಗೊತ್ತಿ. ಇಲ್ಲಿಗೆ ಬಂದು ಪ್ರಚಾರ ಮಾಡಿ ನಮ್ಮೆಲ್ಲರ ಪರವಾಗಿ ನಿಂತರು. ಈ ಬಾರಿ ನಾನೇ ಸ್ಪರ್ಧೆ ಮಾಡಿದ್ದರೆ ಅವರು ಖಂಡಿತವಾಗಿ ನನ್ನ ಪರ ನಿಲ್ಲುತ್ತಿದ್ದರು. ಆದರೆ, ಈಗ ದರ್ಶನ್ ಯಾರನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುವುದನ್ನು ನಾನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು? ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಕಾರಣಗಳೇನು? ಇಲ್ಲಿವೆ ನೋಡಿ ಕೆಲ ಅಂಶಗಳು
ಕಳೆದ ಬಾರಿ ನಾನು ಐತಿಹಾಸಿಕವಾಗಿ ಗೆಲುವು ಸಾಧಿಸಿದರೂ ಈ ಬಾರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಆಗಿದೆ. ಮೈತ್ರಿ ಒಪ್ಪಂದದ ಪ್ರಕಾರ ಆ ಪಕ್ಷದವರಿಗೆ ಬಿಟ್ಟುಕೊಡಲಾಗಿದೆ. ಅಲ್ಲದೆ, ನಾನೀಗ ಬಿಜೆಪಿ ಸೇರುತ್ತಿರುವುದರಿಂದ ಪಕ್ಷದ ನೀತಿಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನೊಳಗೆ ಚರ್ಚೆ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದರು.
ಎಚ್‌ಡಿಕೆ ಪರ ಪ್ರಚಾರ ಮಾಡುವುದರ ಬಗ್ಗೆ ಹೇಳಿದ್ದಿಷ್ಟು
ಇನ್ನು ಇದೇ ವೇಳೆ ಕುಮಾರಸ್ವಾಮಿ ಭೇಟಿ ಮಾಡಿ ಬೆಂಬಲ ಕೋರಿರುವ ಬಗ್ಗೆ ಮಾತನಾಡಿದ ಸಮಲತಾ, ಕುಮಾರಸ್ವಾಮಿ ಅವರದ್ದು ಸೌಜನ್ಯಯುತ ಭೇಟಿಯಾಗಿತ್ತು. ಅವರು ನನ್ನನ್ನು ಭೇಟಿ ಮಾಡಿದ ವೇಳೆ ಈಗಿನ ಚುನಾವಣೆ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಹಳೆಯದ್ದನ್ನೆಲ್ಲ ಮರೆತು ಬಿಡಿ ಎಂದು ಮನವಿ ಮಾಡಿದ್ದರು. ಅಲ್ಲದೆ, ತಮಗೆ ಬೆಂಬಲ ಸೂಚಿಸಿ ಎಂದೂ ಅವರು ಕೇಳಿಕೊಂಡಿದ್ದಾರೆ ಎಂದರು.
ಇನ್ನು ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಪ್ರಚಾರ ಮಾಡುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಬೆಂಬಲಿಗರ ಸಭೆ ಮತ್ತು ಸುದ್ದಿಗೋಷ್ಠಿಯಲ್ಲಾಗಲಿ ಮಂಡ್ಯದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರ ಮಾಡುವ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಬಿಜೆಪಿ ಸೇರ್ಪಡೆ ಬಳಿಕ ಹೇಳುತ್ತೇನೆ ಎಂದು ಹೇಳುವ ಮೂಲಕ ಜಾರಿಕೊಂಡರು. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಬಿಜೆಪಿಗೇನೋ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಆದ್ರೆ, ತಮ್ಮ ಕ್ಷೇತ್ರದಲ್ಲಿ ರಾಜಕೀಯ ಬದ್ಧವೈರಿ ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ಪರ ಪ್ರಚಾರ ಮಾಡುತ್ತಾರಾ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ನಾಯಕರು ಸುಮಲತಾ ಅಂಬರೀಶ್ ಅವರಿಗೆ ಹೇಗೆಲ್ಲ ಬೈದಾಡಿದ್ದರು. ಏನೆಲ್ಲಾ ಆರೋಪಗಳನ್ನು ಮಾಡಿದ್ದರು? ಎನ್ನುವುದು ಜಗಜ್ಜಾಹೀರಾಗಿದೆ. ಇದರಿಂದ ಸುಮಲತಾ ಈಗ ಎಚ್‌ಡಿಕೆ ಪರ ಕೆಲಸ ಮಾಡುತ್ತಾರಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Wed, 3 April 24