ಮೈಕ್ರೋ ಫೈನಾನ್ಸ್ ಕಿರುಕುಳ: ತಾಯಿ ಆತ್ಮಹತ್ಯೆ ಬೆನ್ನಲ್ಲೇ ಮಗ ಸಹ ದುರಂತ ಸಾವು..!
ಈ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯ ಜಿಲ್ಲೆಯ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇದೀಗ ಅದೇ ನೋವಿನಲ್ಲಿ ಮಗನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು (ಫೆಬ್ರವರಿ 01) ಹಲಗೂರು ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಪುತ್ರ ರಂಜಿತ್ ಶವ ಪತ್ತೆಯಾಗಿದೆ. ತಾಯಿ ಸತ್ತ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಂಡ್ಯ, (ಫೆಬ್ರವರಿ 01): ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ತಾಯಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇದೀಗ ಮಗನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ (Malavalli) ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಫೈನಾನ್ಸ್ನವರ ಕಿರುಕುಳಕ್ಕೆ ಬೇಸತ್ತು 4 ದಿನದ ಹಿಂದೆ ಅಷ್ಟೇ ಪ್ರೇಮಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದ್ರೆ, ಮೊನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಾಯಿಯನ್ನು ಕಳೆದುಕೊಂಡು ಮನನೊಂದು ಪುತ್ರ ರಂಜಿತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು (ಫೆಬ್ರವರಿ 01) ಹಲಗೂರು ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರಂಜಿತ್ ಶವ ಪತ್ತೆಯಾಗಿದೆ. ತಾಯಿ ಸತ್ತ ದಿನವೇ ಅಂದರೆ ಎರಡ್ಮೂರು ದಿನದ ಹಿಂದೆ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಪ್ರೇಮಾ ಸಾವಿನ ಆಘಾತದಿಂದ ಮನನೊಂದಿದ್ದ. ಜೊತೆ ಅನಾರೋಗ್ಯಕ್ಕೆ ತುತ್ತಾಗಿ ಅಂಗವೈಕಲ್ಯದಿಂದ ಬಳಲುತ್ತಿದ್ದ. ಮುಂದೆ ಜೀವನ ಹೇಗೆ ಎಂದು ಚಿಂತೆಗೀಡಾಗಿದ್ದ. ಈ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತಿಬ್ಬರು ಬಲಿ: ಓರ್ವ ಮಹಿಳೆ ಜೀವನ್ಮರಣ ಹೋರಾಟ!
ಮೈಕ್ರೋ ಫೈನಾನ್ಸ್ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಾಲ್ಕು ದಿನದ ಹಿಂದೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಪ್ರೇಮ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೊನ್ನೆ ಮೃತಪಟ್ಟಿದ್ದಳು. ತಾಯಿಯ ಸಾವಿನಿಂದಾಗಿ ಮನನೊಂದು ಅನಾರೋಗ್ಯಕ್ಕೆ ತುತ್ತಾಗಿ ಅಂಗವೈಕಲ್ಯದಿಂದ ಬಳಲುತ್ತಿದ್ದ ರಂಜಿತ್, ಮುಂದೆ ಜೀವನ ಹೇಗೆ ಎಂದು ತಿಳಿಯದೇ ಹಲಗೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಅವರೇ ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂಪಾಯಿ ಹಣವನ್ನು ನಮ್ಮ ತಾಯಿ ಕಟ್ಟಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡಿದ್ದಾರೆ. ಈಗ ಇನ್ನೂ 6 ಲಕ್ಷ ರೂ. ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದಾರೆ . ಮನೆ ಹತ್ತಿರ ಬಂದು ಗಲಾಟೆ ಮಾಡಿ ಮನೆ ಸೀಜ್ ಮಾಡಿದ್ದಾರೆ. ಇದಕ್ಕೆ ಮನನೊಂದು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದಾರೆ. ಈಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ. ಈಗ ನಮಗೆ ಯಾರು ದಿಕ್ಕು ಎಂದು ಮೃತ ಪ್ರೇಮಾ ಮಗಳು ಮಾಣಿಕ್ಯ ಅಳಲು ತೊಡಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Sat, 1 February 25