ಜನರ ವಿರೋಧ ಅರಿತು ಧ್ವಜ ಪ್ರಕರಣದಿಂದ ಹಿಂದೆ ಸರಿದ ಬಿಜೆಪಿ, ಜೆಡಿಎಸ್; ಚೆಲುವರಾಯಸ್ವಾಮಿ
ಮಂಡ್ಯ ಬಂದ್ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ಥಳೀಯ ಯುವಕರು ಧ್ವಜ ಪ್ರಕರಣದ ವಿಚಾರದಲ್ಲಿ ಮುಂದೆ ಹೋಗಿಲ್ಲ ಅಂತ ಅವರನ್ನು ಉಪಯೋಗಿಸಿಕೊಂಡು ಬಿಜೆಪಿಯವರು, ಸಂಘ- ಸಂಸ್ಥೆಯವರು, ಜೆಡಿಎಸ್ನವರು ಇದನ್ನು ಟ್ವಿಸ್ಟ್ ಮಾಡಿದ್ದಾರೆ ಎಂದರು.
ಮಂಡ್ಯ, ಫೆಬ್ರವರಿ 09: ಮಂಡ್ಯದ (Mandya) ಜನತೆ ಧ್ವಜ ಪ್ರಕರಣದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ವಿರುದ್ಧವಾಗಿದ್ದಾರೆ. ಇದು ಅರ್ಥವಾದ ಮೇಲೆ ಬಿಜೆಪಿ, ಜೆಡಿಎಸ್ ಸ್ವಲ್ಪ ಹಿಂದೆ ಬಂದಿದೆ. ಪರೋಕ್ಷವಾಗಿ ಯುವಕರನ್ನ ಸಪೋರ್ಟ್ ಮಾಡಿ ಬೈಕ್ ರ್ಯಾಲಿ ಮಾಡಿದ್ದಾರೆ. ಎಷ್ಟು ಸಾವಿರ ಜನ ಬಂದಿದ್ದಾರೆ ನಮಗಂತೂ ಲೆಕ್ಕ ಇಲ್ಲ. ಇದೊಂದು ದುರಂತ (Mandya Bandh) ಎಂದು ಸಚಿವ ಚೆಲುವರಾಯಸ್ವಾಮಿ (N Chaluvaraya Swamy) ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಂಡ್ಯ ಬಂದ್ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಸಂವಿಧಾನದ ವಿರುದ್ಧ ಪ್ರಜಾಪ್ರಭುತ್ವದ ವಿರುದ್ಧ, ರಾಷ್ಟ್ರಧ್ವಜದ ವಿರುದ್ಧ ಅವರು ಘೋಷಣೆ ಕೂಗಿದ್ದಾರೆ. ಹನುಮನ ಧ್ವಜ ಹಾರಿಸಲು ಅದಕ್ಕೆ ಆದ ಜಾಗ ಇದೆ. ವೈಯಕ್ತಿಕ ಧರ್ಮದ ವಿಚಾರದಲ್ಲಿ ಯಾರದ್ದು ತಪ್ಪು ಎನ್ನಲ್ಲ. ಆದರೆ ಅದಕ್ಕೊಂದು ಇತಿಮತಿ ಇದೆ. ಮೊದಲನೇ ಆದ್ಯತೆ ಸಂವಿಧಾನ, ಮೊದಲನೆಯ ಆದ್ಯತೆ ಪ್ರಜಾಪ್ರಭುತ್ವ, ಮೊದಲನೇ ಆದ್ಯತೆ ಭಾರತ ದೇಶ ಇದನ್ನ ಬಿಟ್ಟು ಈ ಫ್ಲಾಗ್ ಹಾರಿಸಿದ್ದೆ ತಪ್ಪು. ಬಿಜೆಪಿ, ಜೆಡಿಎಸ್ ಗೆ ಜನತೆಯೇ ಉತ್ತರ ಕೊಡಬೇಕು ಎಂದರು.
ಕುವೆಂಪು ಅವರನ್ನು ಅತ್ಯಂತ ಹೆಚ್ಚು ಪ್ರೀತಿಸಿದ ಜಿಲ್ಲೆ ಮಂಡ್ಯ. ಅದಕ್ಕೆ ಕುವೆಂಪು ಅವರ ಮಾತಿಗೆ ವಿರುದ್ಧವಾಗಿ ಇವತ್ತು ಬಂದ್ ಮಾಡಲಾಗಿದೆ. ಇಲ್ಲಿಯವರೆಗೆ ಯಾವುದೇ ಜಾತಿಗಳ ನಡುವೆ, ಧರ್ಮಗಳ ನಡುವೆ ಘರ್ಷಣೆ ಆಗುವ ಅವಕಾಶ ಮಂಡ್ಯದಲ್ಲಿ ಇರಲಿಲ್ಲ ಮುಂದೆಯೂ ಆಗುವುದಕ್ಕೆ ಅವಕಾಶ ಇಲ್ಲ. ಜನರು ಕೂಡ ಯಾವುದೇ ತರದ ಪ್ರಚೋದನೆಗೆ ಒಳಗಾಗುವುದಿಲ್ಲ. ಪ್ರಚೋದನೆಗೆ ಒಳಪಡಿಸುವ ಪ್ರಯತ್ನ ಯಾರೇ ಮಾಡಿದರು ಅದಕ್ಕೆ ಅವಕಾಶ ಸಿಗುವುದಿಲ್ಲ ಎಂದರು.
ಇದನ್ನೂ ಓದಿ: ಕೆರಗೋಡು ಹನುಮ ಧ್ಜಜ ವಿವಾದ: ಹಿಂದೂ ಪರ ಸಂಘಟನೆಗಳಿಂದ ಮಂಡ್ಯ ಬಂದ್, ಬಿಗಿ ಪೊಲೀಸ್ ಭದ್ರತೆ
ಅನೇಕ ಇಂಥ ಘಟನೆಗಳು ನಡೆದಿವೆ. ಕೆರೆಗೋಡಲ್ಲಿ ಆದ ಘಟನೆ ಅಲ್ಲಿಯ ಸಂಘದವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸ್ಥಳೀಯ ಯುವಕರು ಧ್ವಜ ಪ್ರಕರಣದ ವಿಚಾರದಲ್ಲಿ ಮುಂದೆ ಹೋಗಿಲ್ಲ ಅಂತ ಅವರನ್ನು ಉಪಯೋಗಿಸಿಕೊಂಡು ಬಿಜೆಪಿಯವರು, ಸಂಘ- ಸಂಸ್ಥೆಯವರು, ಜೆಡಿಎಸ್ನವರು ಇದನ್ನು ಟ್ವಿಸ್ಟ್ ಮಾಡಿದ್ದಾರೆ. ಅಂತಿಮವಾಗಿ ಜಿಲ್ಲಾಡಳಿತದ ಮೀಟಿಂಗ್ನಲ್ಲಿ ಯುವಕರು ನಮ್ಮ ಪಾತ್ರವೇನು ಇಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ಹೀಗೆ ಬಿಟ್ರೆ ಇವರು ದೇಶವನ್ನು ಎಲ್ಲಿಗೆ ಕೊಂಡೊಯ್ತಾರೆ ಎಂಬ ಆತಂಕವಿದೆ. ಮೊನ್ನೆ ದೇವೇಗೌಡ್ರು ಕೇಸರಿ ಶಾಲು ಹಾಕಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ನವರು ಮುಂದಕ್ಕೆ ಹೋಗಿದ್ದಾರೆ. ಹಿಂದಕ್ಕೆ ಬರಲಾಗದೆ ತಪ್ಪನ್ನು ಒಪ್ಪಿಕೊಳ್ಳಲಾಗದೆ ಮಂಡ್ಯ ಜನರ ಭಾವನೆಗೆ ಸ್ಪಂದಿಸಲಾಗದೆ ಹೀಗೆ ಬಂದ್ ಮಾಡಿದ್ದಾರೆ. ಇದಕ್ಕೆ ಜನ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ ಆಕ್ರೋಶ ಹೊರ ಹಾಕಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ