ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯ ಜಿಲ್ಲೆ ರೈತರಿಗೆ ಈ ಬಾರಿ ಡಬಲ್ ಧಮಾಕ…!
ಕನ್ನಡಿಗರ ಜೀವನಾಡಿ ಕನ್ನಂಬಾಡಿ ಭರ್ತಿಯತ್ತ ಸಾಗುತ್ತಿದ್ದಂತೆ ಮಂಡ್ಯ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಮಂಡ್ಯ ಜಿಲ್ಲೆಯ ಅನ್ನದಾತರ ಜೀವನಾಡಿ ಮೈಶುಗರ್ ಕಾರ್ಖಾನೆ ಕಬ್ಬು ನುರಿಯಲು ಸನ್ನದ್ದವಾಗಿರೋದು ಈ ಭಾಗದ ರೈತರ ಸಂತಸ ಇಮ್ಮಡಿಗೊಳಿಸಿದೆ. ಇದರ ಬೆನ್ನಲ್ಲೇ ಇಂದು ಸಂಪ್ರದಾಯದಂತೆ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಫ್ಯಾಕ್ಟರಿ ಕಾರ್ಯಾರಂಭಕ್ಕೆ ಮುನ್ನುಡಿ ಬರೆಯಲಾಯ್ತು.

ಮಂಡ್ಯ, (ಜೂನ್ 23): ಸಕ್ಕರೆನಾಡು ಮಂಡ್ಯ ಜಿಲ್ಲೆಯ ರೈತರಿಗೆ (Mandya Farmers) ಈ ಬಾರಿ ಡಬಲ್ ಖುಷಿ. ಒಂದೆಡೆ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟು (Krishna Raja Sagara Reservoir) ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲೀಗ 120 ಅಡಿಗೂ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. KRS ಡ್ಯಾಂ ಭರ್ತಿಗೆ ಕೇವಲ ನಾಲ್ಕು ಅಡಿ ಬಾಕಿ ಇದ್ದು, ಎರಡ್ಮೂರು ದಿನಗಳಲ್ಲಿ ಅಣೆಕಟ್ಟು ಸಂಪೂರ್ಣ ತುಂಬಲಿದೆ. ಹೀಗಾಗಿ,ಇತಿಹಾಸದಲ್ಲೇ ಜೂನ್ ತಿಂಗಳಲ್ಲೇ ಕನ್ನಂಬಾಡಿ ಒಡಲು ತುಂಬಿ ಕಾವೇರಿ ಕೊಳ್ಳದ ರೈತರ ನೀರಿನ ದಾಹ ತಣಿಸಲಿದೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಮೈಶುಗರ್ ಕಾರ್ಖಾನೆ (mysugar factory) ಕೂಡ ಕಾರ್ಯಾರಂಭಕ್ಕೆ ಸನ್ನದ್ಧವಾಗಿದೆ.
ಅತ್ತ KRS ಭರ್ತಿಯಾಗ್ತಿದ್ರೆ, ಇತ್ತ ಮೈಶುಗರ್ ಕಾರ್ಯಾರಂಭಕ್ಕೆ ಸಜ್ಜಾಗಿದೆ. ಈ ಎರಡೂ ವಿಚಾರಗಳು ಮಂಡ್ಯ ಜಿಲ್ಲೆಯ ರೈತರ ಪಾಲಿಗೆ ಖುಷಿ ವಿಚಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಸಂಪ್ರದಾಯದಂತೆ ಮಂಡ್ಯದ ಮೈಶುಗರ್ ಕಾರ್ಖಾನೆಯ ಬಾಯ್ಲರ್ ಗೆ ಅಗ್ನಿಸ್ಪರ್ಶ ನೀಡಲಾಯ್ತು. ಅಗ್ನಿಸ್ಪರ್ಶಕ್ಕೂ ಮುನ್ನ ವಿಶೇಷ ಪೂಜೆ, ಹೋಮ ಹವನ ನಡೆಸಲಾಯ್ತು. ಕಾರ್ಖಾನೆ ಆವರಣದಲ್ಲಿ ಕಳಶ ಪ್ರತಿಷ್ಠಾಪಿಸಿ ಗಣಪತಿ ಹೋಮ. ಹೋಮದ ಪೂರ್ಣಾಹುತಿ ಬಳಿಕ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಯ್ತು.
ಇದನ್ನೂ ಓದಿ: ಶಾಲೆ ನಡೆಸಲಾಗದ್ದಷ್ಟು ಬಡವಾಯ್ತೆ ಸರ್ಕಾರ: ಮೈಶುಗರ್ ಶಾಲೆ ಕಾಂಗ್ರೆಸ್ ಮುಖಂಡನ ತೆಕ್ಕೆಗೆ?
ಈ ಸಂದರ್ಭದಲ್ಲಿ ಮಂಡ್ಯ ಶಾಸಕ ಗಣಿಗ ಪಿ.ರವಿಕುಮಾರ್, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಡಿಸಿ ಡಾ.ಕುಮಾರ ಮತ್ತಿತರರು ಭಾಗಿಯಾದ್ರು. ಬಳಿಕ ಮಾತನಾಡಿದ ಶಾಸಕ ಗಣಿಗ ರವಿ, ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಈ ಬಾರಿ 4.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಇದೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಮೂಲ ಬಂಡವಾಳಕ್ಕೆ 28 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಕ್ಕರೆ ಕಾರ್ಖಾನೆ ರೈತರ ಏಳಿಗೆಗಾಗಿ ನಡೆಸುತ್ತಿರುವ ಕಾರ್ಖಾನೆ. ಕಾರ್ಖಾನೆಯನ್ನು ಲಾಭ-ನಷ್ಟ ಲೆಕ್ಕ ಮಾಡಿಕೊಂಡು ನಡೆಸಲು ಸಾಧ್ಯವಿಲ್ಲ. ನಿಧಾನಗತಿಯಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಸಹ ಲಾಭ ಗಳಿಸಲಿದೆ. ಅದಕ್ಕೆ ಸಮಯಾವಕಾಶ ಬೇಕಿದೆ. ಈ ಬಾರಿ ರೈತರಿಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ವಹಿಸಲಾಗುತ್ತದೆ ಅಂದ್ರು.
ಏನೇ ಹೇಳಿ, ಕಾಲ ಕಾಲಕ್ಕೆ ಮಳೆಯಾಗದೆ ನೀರಿನ ಅಭಾವ ಎದುರಾಗಿ ಕಾವೇರಿ ಸಮಸ್ಯೆ ಉಲ್ಭಣಿಸ್ತಿತ್ತು. ಇದರ ಜೊತೆಗೆ ಮೈಶುಗರ್ ಕಾರ್ಖಾನೆ ಯಾವಾಗ ಆರಂಭವಾಗುತ್ತೆ ಅನ್ನೋ ಚಿಂತೆ ಮಂಡ್ಯ ಜನರನ್ನ ಕಾಡ್ತಿತ್ತು. ಈ ಬಾರಿ ಅವಧಿಗೂ ಮುನ್ನವೇ ಉತ್ತಮ ಮಳೆಯಿಂದ ಕನ್ನಂಬಾಡಿ ಭರ್ತಿಯಾಗ್ತಿರೋದು ಒಂದೆಡೆ ಆದ್ರೆ, ಮತ್ತೊಂದೆಡೆ ಜುಲೈ ವೇಳೆಗೆ ಜಿಲ್ಲೆಯ ಜೀವನಾಡಿ ಮೈಶುಗರ್ ಕಾರ್ಯಾರಂಭ ಮಾಡ್ತಿರೋದು ಮಂಡ್ಯ ರೈತರು ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿರೋದಂತೂ ಸುಳ್ಳಲ್ಲ.



