ಲಿಂಗಾನುಪಾತ ಮತ್ತಷ್ಟು ಹೆಚ್ಚಳ; 1000 ಗಂಡು ಮಕ್ಕಳಿಗೆ 865 ಹೆಣ್ಣು ಮಕ್ಕಳು! ಸಂಸದೆ ಸುಮಲತಾ ಶಾಕ್
2011 ರ ಜನಗಣತಿ ಪ್ರಕಾರ 1000 ಗಂಡಿಗೆ 939 ಹೆಣ್ಣು ಮಕ್ಕಳಿದ್ದರು. ಆದರೆ ಈಗ ಲಿಂಗಾನುಪಾದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. 1000 ಗಂಡು ಮಕ್ಕಳಿಗೆ ಕೇವಲ 865 ಹೆಣ್ಣು ಮಕ್ಕಳಿದ್ದಾರೆ ಎಂಬ ಮಾಹಿತಿ ತಿಳಿದು ಮಂಡ್ಯ ಸಂಸದೆ ಸುಮಲತಾ ಅವರು ದಂಗಾಗಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿ ಭ್ರೂಣ ಹತ್ಯೆ ಹಾಗೂ ಭ್ರೂಣ ಪತ್ತೆಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯ, ಫೆ.23: ಇತ್ತೀಚೆಗೆ ರಾಜ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ (Female Feticide) ಪ್ರಕರಣ ಭಾರೀ ಸದ್ದು ಮಾಡಿತ್ತು. ಆರೋಗ್ಯ ಇಲಾಖೆಯಿಂದ ಹಲವೆಡೆ ದಾಳಿಯೂ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಲಿಂಗಾನುಪಾತ (Sex Ratio) ಮತ್ತಷ್ಟು ಹೆಚ್ಚಾಗಿದ್ದು, 2011 ರ ಜನಗಣತಿ ಪ್ರಕಾರ 1000 ಗಂಡು ಮಕ್ಕಳಿಗೆ 939 ಹೆಣ್ಣು ಮಕ್ಕಳಿತ್ತು. ಆದರೆ, ಇತ್ತೀಚೆಗೆ ಜನಿಸುತ್ತಿರುವ ಸಂಖ್ಯೆ ತೆಗೆದುಕೊಂಡರೇ ಸಾವಿರ ಗಂಡು ಮಕ್ಕಳಿಗೆ ಕೇವಲ 865 ಹೆಣ್ಣು ಮಕ್ಕಳಿದ್ದಾರೆ.
ಇಂದು ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಕೇಳಿ ದಂಗಾದ ಸಂಸದೆ ಸುಮಲತಾ, ಇದು ತುಂಬಾ ಅಪಾಯಕಾರಿ ಬೆಳವಣಿಗೆ, ಇದನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗ ಪತ್ತೆಗೆ ಕಡಿವಾಣ ಹಾಕಬೇಕು. ಅಲ್ಲದೇ ಸ್ಪಷ್ಟ ಮಾಹಿತಿ ಜೊತೆಗೆ ಸಭೆಗೆ ಬನ್ನಿ ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ದಿಶಾ ಸಭೆಯಲ್ಲಿ ಪ್ರತಿಧ್ವನಿಸಿದ ಹೆಣ್ಣು ಭ್ರೂಣ ಹತ್ಯೆ
ದಿಶಾ ಸಭೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಪ್ರತಿಧ್ವನಿಸಿತು. ಪ್ರಕರಣದ ಸಂಬಂಧ ಮಾಹಿತಿ ಏನಿದೆ? ಏನೇನೂ ಮುಂಜಾಗೃತ ಕ್ರಮ ಕೈಗೊಂಡಿದ್ದೀರಿ? ಎಷ್ಟು ಭ್ರೂಣ ಪತ್ತೆಯಾಗಿದೆ ಮತ್ತು ಎಷ್ಟು ಹೆಣ್ಣು ಭ್ರೂಣ ಹತ್ಯೆಯಾಗಿದೆ ಎಂದು ಮಾಹಿತಿ ನೀಡುವಂತೆ ಸುಮಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣ: ಸ್ಕ್ಯಾನಿಂಗ್ ಯಂತ್ರಗಳ ಸರಬರಾಜು ಮಾಡಿದ್ದ ಆರೋಪಿ ಬಂಧನ
ಮಾಹಿತಿ ನೀಡಲು ತಡಬಡಾಯಿಸಿದ ಆರೋಗ್ಯ ಅಧಿಕಾರಿ ವಿರುದ್ಧ ಸುಮಲತಾ ಅವರು ಗರಂ ಆದರು. ಕೊನೆಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಮಧ್ಯಪ್ರವೇಶಿಸಿ, ಕೈಗೊಂಡ ಕ್ರಮಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕಾನೂನು ಅರಿವು ಕಾರ್ಯಕ್ರಮಗಳನ್ನ ರೂಪಿಸಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಯವರು ಸಂಸದರ ಗಮನಕ್ಕೆ ತಂದರು. ಯಾರ ಮೇಲೆ ಕ್ರಮವಾಗಿದೆ ಎಂದು ಸುಮಲತಾ ಅವರು ಪೊಲೀಸರನ್ನು ಪ್ರಶ್ನಸಿಇದರು. ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 18 ಮಂದಿಯನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ಮಂಡ್ಯದ ಮೂವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಈಗ ಎಲ್ಲಿಯೂ ಆ ದಂಧೆ ನಡೆಯುತ್ತಿಲ್ಲ ಎಂದು ಎಸ್ಪಿ ಹೇಳಿದಾಗ ಮೂರು ವರ್ಷದ ಹಿಂದೆಯೂ ಇದೇ ಉತ್ತರ ನನಗೆ ಬಂದಿತ್ತು. ಆದಾದ ಬಳಿಕವು ಈ ಪ್ರಕರಣ ಬೆಳಕಿಗೆ ಬಂದಿದೆ. ಆ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡದ ಮೂಲಕ ದಾಳಿ ಮಾಡುವ ಕೆಲಸ ಮಾಡಬೇಕು. ಗಂಭೀರವಾಗಿ ಪರಿಗಣಿಸಿ ತಡೆಗಟ್ಟಬೇಕು ಎಂದು ಎಸ್ಪಿಗೆ ಸುಮಲತಾ ಸೂಚನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ