ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ತಿರೋದು ಸರಿಯಲ್ಲ, ವರ್ತೂರ್ ಸಂತೋಷ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಹಳ್ಳಿಕಾರ್ ಸಂರಕ್ಷಕರು
ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ತಿರೋದು, ಬಿಂಬಿಸಿಕೊಳ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ ಎಂದು ವರ್ತೂರ್ ಸಂತೋಷ್ ವಿರುದ್ಧ ಕಾನೂನು ಹೋರಾಟ ನಡೆಸಲು ಹಳ್ಳಿಕಾರ್ ಸಂರಕ್ಷಕರು ಮುಂದಾಗಿದ್ದಾರೆ. ಬಿಗ್ ಬಾಸ್ ಸ್ವರ್ಧಿ ವರ್ತೂರ್ ವಿರುದ್ಧ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯ, ಫೆ.24: ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ಗೆ (Bigg Boss Kannada) ಬಂದು ಹೋದ ನಂತರ ಇಡೀ ಕರ್ನಾಟಕದ ಮನೆ ಮಗ ಆಗಿದ್ದಾರೆ. ಸದ್ಯ ಜನರು ವರ್ತೂರ್ ಸಂತೋಷ್ ಅವರನ್ನು ಹಳ್ಳಿಕಾರ್ ಒಡೆಯ (Hallikar Odeya) ಅಂತಲೇ ಕರೆಯುತ್ತಾರೆ. ಆದರೆ ಹಳ್ಳಿಕಾರ್ ಎಂಬ ಬಿರುದು ಸಂಬಂಧ ಮತ್ತೆ ವಿವಾದ ತಾರಕಕ್ಕೇರಿದೆ. ವರ್ತೂರು ಸಂತೋಷ್ ವಿರುದ್ದ ಹಳ್ಳಿಕಾರ್ ಸಂರಕ್ಷಕರು ಸಿಡಿದೆದ್ದಿದ್ದಾರೆ. ಸಂತೋಷ್ ವಿರುದ್ದ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಕನ್ನಡದ ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳ್ಳಿಕಾರ್ ಒಡೆಯ ಬಿರುದು ವಿವಾದ ಸೃಷ್ಟಿಯಾಗಿತ್ತು. ಈ ಹಿಂದೆ ವರ್ತೂರು ಸಂತೋಷ್ ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಹಳ್ಳಿಕಾರ್ ತಳಿ ಸಂರಕ್ಷಕರು ಚರ್ಚಾಗೋಷ್ಠಿ ಏರ್ಪಡಿಸಿದ್ದರು. ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ನಡೆದಿತ್ತು. ವಾಗ್ವಾದದಿಂದ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನ ಪೊಲೀಸರು ಕಳುಹಿಸಿದ್ದರು. ಇಷ್ಟೆಲ್ಲಾ ಆದ ಬಳಿಕ ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ವಿರೋಧಿಗಳಿಗೆ ವರ್ತೂರ್ ಸಂತೋಷ್ ಟಾಂಗ್ ಕೊಟ್ಟಿದ್ದರು. ಏಕವಚನದಲ್ಲಿ ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ದ ಹರಿಹಾಯ್ದಿದ್ದರು. ಸದ್ಯ ಈಗ ವರ್ತೂರ್ ಮಾತಿಗೆ ಮತ್ತೆ ಸಿಡಿದೆದ್ದ ಹಳ್ಳಿಕಾರ್ ಸಂರಕ್ಷಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಭೇಟಿಯಾದ ತನಿಷಾ ಹಾಗೂ ವರ್ತೂರ್ ಸಂತೋಷ್
ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ತಿರೋದು, ಬಿಂಬಿಸಿಕೊಳ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರದಿಂದ ಹಳ್ಳಿಕಾರ್ ಸಂರಕ್ಷಣೆ ಮಾಡ್ತಿರುವ ರೈತರ ಭಾವನೆಗೂ ಧಕ್ಕೆ, ಅವಮಾನ ಆಗಿದೆ. ಗೂಗಲ್ ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೇಶನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ. ಎಲ್ಲಾ ದಾಖಲಾತಿಗಳನ್ನ ಸಂಗ್ರಹಿಸುತ್ತಿದ್ದು ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ದ ಕಾನೂನು ಹೋರಾಟ ಮಾಡ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ