ಮಂಡ್ಯ, ನವೆಂಬರ್ 02: ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar) ಕಾಲದಲ್ಲಿ ಕೆಆರ್‌ಎಸ್ ಅಣೆಕಟ್ಟು (KRS Dam) ನಿರ್ಮಾಣವಾಗಿದೆ. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣವಾದಾಗ ಅಳವಡಿಸಿದ್ದ 150 ಕ್ರೆಸ್ಟ್ ಗೇಟ್‌ಗಳನ್ನು ಇತ್ತೀಚಿಗೆ ಬದಲಾವಣೆ ಮಾಡಲಾಗಿದೆ. ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಕರ್ನಾಟಕ ಸರ್ಕಾರ (Karnataka Government) ಮಾರಾಟ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದು ಕೂಡ ಕಡಿಮೆ ಬೆಲೆಗೆ. ಹೌದು, ಗೇಟ್‌ಗಳನ್ನು ಕೇಜಿಗೆ 6 ರೂ.ನಂತೆ ಮಾರಾಟ ಮಾಡಲು ಸರ್ಕಾರ ಸದ್ದಿಲ್ಲದೆ ತಯಾರಿ ನಡೆಸಿದೆ ಎನ್ನಲಾಗಿದೆ.
90 ವರ್ಷದ ಹಳೇಯದಾದ ಸುಮಾರು 650 ಟನ್ ತೂಕದ 150 ಕ್ರಸ್ಟ್ ಗೇಟ್ಗಳು 3 ಕೋಟಿ ರೂ. ಬೆಲೆ ಬಾಳುತ್ತವೆ. ಆದರೆ, ಗೇಟ್ಗಳನ್ನ ಕೇವಲ 36 ಲಕ್ಷ ರೂ.ಗೆ ಮಾರಾಟ ಮಾಡಲು ಜಲಸಂಪನ್ಮೂಲ ಇಲಾಖೆ ತಯಾರಿ ನಡೆಸಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಹಳೇ ಗೇಟ್ ಬದಲಿಸಿ ಹೊಸ ಗೇಟ್ ಅಳವಡಿಸಲಾಗಿದೆ. ಈ ಹಳೇ ಗೇಟ್‌ಗಳನ್ನು ಜಲಸಂಪನ್ಮೂಲ ಇಲಾಖೆ ಮಾರಾಟಕ್ಕೆ ಮುಂದಾಗಿದೆ. ಇಲಾಖೆ ಅಧಿಕಾರಿಗಳು ಪ್ರಭಾವಿಗಳೊಂದಿಗೆ ಶಾಮೀಲಾಗಿ ಕೆಜಿಗೆ 6 ರೂ.ನಂತೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಗುಜರಿಯಲ್ಲಿ ಕೆಜಿಗೆ 40 ರೂ.ನಂತೆ ಹಳೇ ಕಬ್ಬಿಣ ಖರೀದಿ ಮಾಡುತ್ತಾರೆ. ಹೀಗಿರುವಾಗ ಕೆಜಿಗೆ 6 ರೂ.ಗೆ ಯಾಕೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಕೆಂಪೂಗೌಡ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 5ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ; ಬೆಂಗಳೂರಿನ ಈ ನಗರಗಳಿಗೆ ಭಾರಿ ಅನುಕೂಲ
ಹಳೇ ಗೇಟ್‌ಗಳನ್ನು ಮಾರಾಟ ಮಾಡುವ ಬದಲು ಮ್ಯೂಸಿಯಂನಲ್ಲಿ ಇಡಿ. ಮ್ಯೂಸಿಯಂ ಮೂಲಕ ಅಣೆಕಟ್ಟು ಇತಿಹಾಸ ಹಾಗೂ ಮಹಾರಾಜರ ಕೊಡುಗೆ ಬಗ್ಗೆ ಮಾಹಿತಿ ನೀಡಿ. ಒಂದು ವೇಳೆ ವಿರೋಧದ ನಡುವೆಯೂ ಗೇಟ್ ಮಾರಾಟಕ್ಕೆ ಮುಂದಾದರೇ ರೈತ ಸಂಘದಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಆರ್‌ಎಸ್ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ಕೃಷ್ಣರಾಜ ಸಾಗರ ಜಲಾಶಯ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ಅಣೆಕಟ್ಟುಗಳಲ್ಲಿ ಒಂದಾಗಿದೆ. ಮೈಸೂರಿನ ಪಕ್ಕದಲ್ಲೇ ಇರುವ ಈ ಜಲಾಶಯ ಮಂಡ್ಯ ಜಿಲ್ಲೆಯಲ್ಲಿದೆ. ಕರ್ನಾಟಕದ ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದ್ದು, ರಾಜ್ಯದ ಜೀವನಾಡಿ ಎಂದೇ ಪ್ರಸಿದ್ಧವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾಗಿದೆ. ಅಣೆಕಟ್ಟಿನ ಮುಖ್ಯ ಎಂಜಿನಿಯರ್ ಮೈಸೂರಿನ ಸರ್ ಎಂ ವಿಶ್ವೇಶ್ವರಯ್ಯನವರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ