
ಮಂಡ್ಯ, ಆಗಸ್ಟ್ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ವಿವಾದಕ್ಕೀಡಾಗಿರುವ (Cauvery Water Dispute) ನಡುವೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದಲೂ (KRS Dam) ನೀರಿನ ಹೊರಹರಿವು ಹೆಚ್ಚಿಸಲಾಗಿದೆ. ಸದ್ಯ ಕೆಆರ್‌ಎಸ್‌ನಿಂದ ಸುಮಾರು 7 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಜಲಾಶಯ ಇನ್ನೂ ಪೂರ್ಣ ಭರ್ತಿಯಾಗದಿರುವಾಗಲೇ ನೀರು ಹೊರಬಿಡುತ್ತಿರುವುದಕ್ಕೆ ಮಂಡ್ಯ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಮಿಳುನಾಡಿಗೆ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ನೀರು ಹರಿಸುವ ಪ್ರಮಾಣದ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಇಷ್ಟು ದಿನ ಕಬಿನಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿತ್ತು. ಇದೀಗ ಕೆಆರ್‌ಎಸ್‌ನಿಂದಲೂ ಹೊರಹರಿವು ಆರಂಭವಾಗಿದ್ದು, ದಿನದಿಂದ ದಿನಕ್ಕೆ ನೀರು ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ. ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಸದ್ಯ 110.28 ಅಡಿ ನೀರಿದೆ.
ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 32.004 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯ ಪೂರ್ಣ ಭರ್ತಿಯಾಗಲು ಇನ್ನೂ ಸುಮಾರು 17 ಟಿಎಂಸಿ ನೀರು ಬೇಕಿದೆ.
ಮತ್ತೊಂದೆಡೆ, ರಾಜ್ಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಮಂಡ್ಯ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯದಂತೆ ಸರ್ಕಾರ ಮನವಿ ಮಾಡಿದೆ. ನೀರಿನ ಕೊರತೆಯ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕವಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA
ಆದರೆ, ಇದೇ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿಲ್ಲದಿರುವಾಗ ಹೊರಹರಿವು ಹೆಚ್ಚಿಸುವುದು ಏಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ