AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣೆಗೆ ಬಾಸಿಂಗ, ತಲೆಗೆ ಪೇಟ: ರೈತರ ಪರವಾಗಿ ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಬಿಜೆಪಿಗರು

ಹೆಣ್ಣೆತ್ತವರು ರೈತರ ಮಕ್ಕಳಿಗೆ ಹೆಣ್ಣು ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ ಮದುವೆಯಾಗದೆ ಸಾವಿರಾರು ಯುವಕರು ಉಳಿದುಕೊಂಡಿದ್ದು, ಅವರ ಪರವಾಗಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿನೂತ ಪ್ರತಿಭಟನೆ ಮಾಡಲಾಯಿತು. ಶಾದಿ ಭಾಗ್ಯ ಮಾದರಿ ಹೊಸ ಯೋಜನೆ ಜಾರಿಗೊಳಿಸುವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹಣೆಗೆ ಬಾಸಿಂಗ, ತಲೆಗೆ ಪೇಟ: ರೈತರ ಪರವಾಗಿ ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಬಿಜೆಪಿಗರು
ಬಿಜೆಪಿ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ
ದಿಲೀಪ್​, ಚೌಡಹಳ್ಳಿ
| Edited By: |

Updated on:Dec 12, 2025 | 9:37 PM

Share

ಮಂಡ್ಯ, ಡಿಸೆಂಬರ್​ 12: ಮಂಡ್ಯದಲ್ಲಿ (Mandya) ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಇದು ರೈತ‌ ಸಂಕುಲಕ್ಕೆ ದೊಡ್ಡ ಪಿಡುಗಾಗಿ ಮಾರ್ಪಾಡಾಗಿದೆ. ಇತ್ತೀಚೆಗೆ ಹೆಣ್ಣು ಸಿಗಲಿ ಅಂತ ಕೆಲವು ‌ಅವಿವಾಹಿತರು ಮಾದಪ್ಪನಿಗೆ ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು. ಇದೀಗ ಅವಿವಾಹಿತ ಯುವ‌ ರೈತರ (Farmers) ಬೆಂಬಲಕ್ಕೆ ಬಿಜೆಪಿ ಕಾರ್ಯಕರ್ತರು ನಿಂತಿದ್ದು, ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ರೈತರ ಮಕ್ಕಳಿಗೆ ಹೆಣ್ಣು ಕೊಡೋದಕ್ಕೆ ಹಿಂದೇಟು

ಸಕ್ಕರೆ ನಾಡು ಮಂಡ್ಯ ಕೃಷಿ ಪ್ರಧಾನ ಜಿಲ್ಲೆ.‌ ಇಲ್ಲಿನ ಜನರ ಜೀವನಕ್ಕೆ ಕೃಷಿಯೇ ಆಧಾರ.‌‌ ಒಂದು ಕಡೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ‌ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ರೈತರು ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡೋದಕ್ಕೆ ಪರಿತಪಿಸುವಂತಾಗಿದೆ. ಕಾರಣ ಹೆಣ್ಣೆತ್ತವರು ರೈತರ ಮಕ್ಕಳಿಗೆ ಹೆಣ್ಣು ಕೊಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಇದು ಸದ್ಯ ಸಾಮಾಜಿಕ ಪಿಡುಗಾಗಿ ಮಾರ್ಪಾಡಾಗಿದೆ.

ಬಿಜೆಪಿ ಕಾರ್ಯಕರ್ತರ ವಿನೂತನ ಪ್ರತಿಭಟನೆ

ಇನ್ನು 35 ವರ್ಷ ಕಳೆದರೂ ಹೆಣ್ಣು ಸಿಗದ್ದಿದ್ದಕ್ಕೆ ಇತ್ತೀಚೆಗೆ ಅವಿವಾಹಿತರು ಮಾದಪ್ಪನ ಮೊರೆ ಹೋಗಿದ್ದರು.  ಹೆಣ್ಣು ಸಿಗಲಿ ಅಂತ ಹರಕೆ ಕಟ್ಟಿಕೊಂಡು‌ ಪಾದಯಾತ್ರೆ ಮಾಡಿದ್ದರು. ಇದೀಗ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ಹೊಸದೊಂದು‌ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

5 ಲಕ್ಷ ರೂ ಪ್ರೋತ್ಸಾಹ ಧನ

ಮದುವೆ ಗಂಡಿನಂತೆ ಹಣೆಗೆ ಬಾಸಿಂಗ ಕಟ್ಟಿಕೊಂಡು, ತಲೆಗೆ ಮೈಸೂರು ಪೇಟ ಹಾಕಿಕೊಂಡು‌ ಅಣಕು ಪ್ರದರ್ಶನ ಮಾಡುವ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಗಿದೆ. ಶಾದಿ ಭಾಗ್ಯದ ಮಾದರಿಯಲ್ಲಿ ರೈತರನ್ನ ಮದುವೆಯಾಗುವ ಯುವತಿಗೆ 5 ಲಕ್ಷ ರೂ ಪ್ರೋತ್ಸಾಹ ಧನ ನೀಡಬೇಕು. ಈ ರೀತಿ ಮಾಡಿದರೆ ರೈತರ ವಿವಾಹಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಸಮಸ್ಯೆ ಪರಿಹಾರ ಆಗುತ್ತೆ.‌ ಸರ್ಕಾರ ಕೂಡಲೇ ಯೋಜನೆ ಘೋಷಣೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತ ಶಿವು  ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಒಟ್ಟಿನಲ್ಲಿ ರೈತರ ಮಕ್ಕಳಿಗೆ ಕಂಕಣ ಭ್ಯಾಗ ಸಿಗುವುದು ದುಸ್ತರವಾಗುತ್ತಿದ್ದು, ಸಮಸ್ಯೆ ಮತ್ತಷ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕೈ ತುಂಬ ದುಡಿಮೆ‌ ಇದ್ದರೂ ರೈತ ಅನ್ನೋ ಕಾರಣಕ್ಕೆ ಹೆಣ್ಣು ಕೊಡದಿರುವುದು ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:36 pm, Fri, 12 December 25