ಮಂಡ್ಯದಲ್ಲೊಂದು ಅಮಾನುಷ ಕೃತ್ಯ: ಕೈಮುಗಿದು ಬೇಡಿದ್ರೂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ

ಐವರ ಗುಂಪೊಂದು ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ. ಕಿರಾತಕರು ಕ್ರೌರ್ಯವನ್ನು ವಿಡಿಯೋ ಕೂಡ ಮಾಡಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 14 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಂಡ್ಯದಲ್ಲೊಂದು ಅಮಾನುಷ ಕೃತ್ಯ: ಕೈಮುಗಿದು ಬೇಡಿದ್ರೂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ
ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದು
Image Credit source: tv9 kannada
Edited By:

Updated on: Feb 23, 2026 | 8:53 PM

ಮಂಡ್ಯ, ಫೆಬ್ರವರಿ 23: ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಐವರ ಗುಂಪೊಂದು ಓರ್ವ ವ್ಯಕ್ತಿಗೆ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೆ (assault) ಮಾಡಿರುವಂತಹ ಘಟನೆ ನಡೆದಿದೆ. ಹುಡುಗಿ ವಿಚಾರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೈಮುಗಿದು ತಪ್ಪಾಯ್ತು ಎಂದರೂ ಬಿಡದೆ ಕಾಲಿನ ಮೇಲೆ ಸೈಜುಗಲ್ಲಿನಿಂದ  ಭೀಕರವಾಗಿ ಹಲ್ಲೆ ಮಾಡಿದ ಕಿರಾತಕರು ವ್ಯಕ್ತಿಯ ಕಾಲು ಮುರಿದಿದ್ದಾರೆ. ಇನ್ನು ತಾವೆಸಗಿದ ಕ್ರೌರ್ಯವನ್ನು ವಿಡಿಯೋ ಕೂಡ ಮಾಡಿದ್ದಾರೆ. ಇದೀಗ ಪಾಂಡವಪುರ ಠಾಣೆಯಲ್ಲಿ 14 ಆರೋಪಿಗಳ ವಿರುದ್ಧ FIR ದಾಖಲಾಗಿದೆ.

ಎಫ್​ಐಆರ್​​ನಲ್ಲಿ ಏನಿದೆ? 

ಫೆಬ್ರವರಿ 22ರಂದು ಮಧ್ಯಾಹ್ನ 03 ಗಂಟೆ ಸಮಯದಲ್ಲಿ ಚೇಕನಹಳ್ಳಿಯಲ್ಲಿರುವ ನನ್ನ ಚಿಕ್ಕಮ್ಮನ ಮಗ ನಂದೀಶನ ಬೈಕಿನಲ್ಲಿ ಚಿನಕುರಳಿಗೆ ಡ್ರಾಪ್ ತೆಗೆದುಕೊಳ್ಳುವ ಸಲುವಾಗಿ ಕನಗನಹಳ್ಳಿಯಿಂದ ಸ್ವಲ್ಪ ಮುಂದೆ ಕೆ.ಆರ್ ಪೇಟೆ – ಮೈಸೂರು ಮುಖ್ಯರಸ್ತೆಯಲ್ಲಿ ಚಿನಕುರಳಿ ಕಡೆಗಾದಂತೆ ನಾನು ಮತ್ತು ನವೀನ, ಬೈಕಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ್ ಮತ್ತು ಬೈಕಿನಲ್ಲಿ ಬಂದಂತಹ ನಮ್ಮ ಗ್ರಾಮದ ಗಿರೀಶ್, ಮಂಜು ಅಲಿಯಾಸ್​ ಪ್ಲಗ್, ಜೀವನ್, ಶಶಿಕುಮಾರ, ಅಯ್ಯಪ್ಪ, ಮದನ್, ಡಿಂಕಾ ಗ್ರಾಮದ ಮಾದಪ್ಪ, ರವಿ ಮತ್ತು ನಿಂಗಣ್ಣ, ಗಣೇಶರವರು ಅಕ್ರಮ ಗುಂಪುಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಮತ್ತು ಕಲ್ಲನ್ನು ಹಿಡಿದುಕೊಂಡು ಬಂದು ನಮ್ಮನ್ನು ಅಡ್ಡ ಹಾಕಿದರು.

ಇದನ್ನೂ ಓದಿ: ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು

ಕೂಡಲೇ ನಾನು ಮತ್ತು ನವೀನ ಬೈಕಿನಿಂದ ಜಿಗಿದು ಕನಗನಹಳ್ಳಿ ಜಮೀನು ಕಡೆಯಿಂದ ಮರಸನಹಳ್ಳಿ ಕಡೆಗೆ ಓಡಲು ಸ್ಟಾರ್ಟ್ ಮಾಡಿದೇವು. ಮೇಲ್ಕಂಡವರು ನಮ್ಮನ್ನ ಬೆನ್ನತ್ತಿ ಬಂದರು. ಆಗ ನವೀನ ಗದ್ದೆಯಲ್ಲಿ ಬಿದ್ದುಹೋದ. ಆಗ ಗಿರೀಶ, ಮಂಜ, ನಿಂಗಣ್ಣ, ಗಣೇಶ ಮತ್ತು ಮುದ್ದಪ್ಪ, ಶಿವಣ್ಣ ಶಿವಳ್ಳಿ ರವರು ಕಲ್ಲು ಮತ್ತು ದೊಣ್ಣೆಯಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆಯುತ್ತಿದ್ದರು. ಆಗ ನಾನು ಪ್ರಾಣಭಯದಿಂದ ಮೊರಸನಹಳ್ಳಿ ಕಡೆಗೆ ಓಡಿಬಂದೆ. ನನ್ನ ಹಿಂದೆ ಬೆನ್ನಟ್ಟಿ ಬಂದ ಜೀವನ್, ಶಶಿಕುಮಾರ್ ಅಯ್ಯಪ್ಪ, ಮದನ, ರವಿ, ಮಾದಪ್ಪ ಮತ್ತು ಪವನ ನನ್ನನ್ನು ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ರವಿ ದೊಣ್ಣೆಯಿಂದ ನನ್ನ ತಲೆಯ ಹಿಂಭಾಗಕ್ಕೆ, ಮಾದಪ್ಪ ದೊಣ್ಣೆಯಿಂದ ನನ್ನ ಬಲಕಾಲಿಗೆ ಹೊಡೆದು ರಕ್ತಗಾಯ ಪಡಿಸಿದರು. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಗಿರೀಶ, ದೊಣ್ಣೆಯನ್ನು ತೆಗೆದುಕೊಂಡು ಬಾಯಿಗೆ ತುರುಕಿದನು. ನಿಂಗಣ್ಣ ದೊಣ್ಣೆಯಿಂದ ಎಡಕಾಲಿಗೆ ಹೊಡೆದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ಮೊರಸಹಳ್ಳಿ ಗ್ರಾಮದ ಕೆಲವರು ಅವರಿಂದ ನನ್ನನ್ನು ಬಿಡಿಸಿದರು. ಈ ಮೇಲ್ಕಂಡವರೆಲ್ಲರೂ ಈ ದಿನ ಬದುಕಿಕೊಂಡಿದ್ದೀಯಾ ಮಗನೇ ನೀವೂ ಪದೇ ಪದೇ ನಮ್ಮ ವಿಚಾರಕ್ಕೆ ಬರತ್ತಾ ಇದ್ದೀಯಾ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿ ಅವರು ಹಿಡಿದುಕೊಂಡು ಬಂದಿದ್ದ ಕಲ್ಲು ಮತ್ತು ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೊರಟು ಹೋದರು.

ನನಗೆ ಮತ್ತು ನವೀನನಿಗೆ ಹೊಡೆದದ್ದನ್ನು ಕಣ್ಣಾರೆ ಕಂಡಂತಹ ನಮ್ಮ ಚಿಕ್ಕಮ್ಮನ ಮಗ ಚೀಕನಹಳ್ಳಿ ಗ್ರಾಮದ ನಂದೀಶ, ಅವನು ಗಾಬರಿಗೊಂಡು ಸ್ಥಳದಿಂದ ಹೊರಟುಹೋದ. ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ನನ್ನನ್ನು ಮತ್ತು ನವೀನನನ್ನು ಆಂಬ್ಯುಲೆನ್ಸ್‌ನಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು.

ಇದನ್ನೂ ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಈ ಗಲಾಟೆ ವಿಚಾರವನ್ನು ತಿಳಿದು ಆಸ್ಪತ್ರೆಯ ಬಳಿ ಬಂದ ನಮ್ಮ ಗ್ರಾಮದ ನಮ್ಮ ದೊಡ್ಡಪ್ಪನ ಮಗ ಸ್ವಾಮಿಯು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಮೈಸೂರಿನ ಜೆ.ಎಸ್.ಎಸ್ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ಆದ್ದರಿಂದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.