ಮಂಡ್ಯ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್
ಪತ್ನಿಯ ಮುಂದೆ ಶ್ರೀಮಂತಿಕೆ ಪ್ರದರ್ಶಿಸಲು ಸರಗಳ್ಳತನದ ದಂಧೆಗಿಳಿದಿದ್ದ ಮಂಡ್ಯದ ಗುರುಪ್ರಸಾದ್ ಎಂಬಾತ ಹಾಗೂ ಆತನ ಮೂವರು ಸಹಚರರನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 70 ಲಕ್ಷ ರೂ. ಮೌಲ್ಯದ 475 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ವಿಶೇಷವೆಂದರೆ, ಕಳ್ಳತನ ನಿಲ್ಲಿಸಿದ ವರ್ಷದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಮಂಡ್ಯ, ಮೇ 27: ಪತ್ನಿಯ ಮುಂದೆ ದೊಡ್ಡ ಶ್ರೀಮಂತನಂತೆ ಬದುಕು ನಡೆಸಬೇಕೆಂಬ ಹಪಾಹಪಿಗೆ ಬಿದ್ದ ವ್ಯಕ್ತಿಯೊಬ್ಬ ಮೂವರು ಸಹಚರರೊಂದಿಗೆ ಸೇರಿ ಸರಗಳ್ಳತನಕ್ಕಿಳಿದು, ಕೊನೆಗೂ ಪೊಲೀಸರ ಅತಿಥಿಯಾಗಿರುವ ವಿಚಿತ್ರ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್-ಜಿಲ್ಲಾ ಖದೀಮರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ಪ್ರಮುಖ ಆರೋಪಿ ಗುರುಪ್ರಸಾದ್ ಅಲಿಯಾಸ್ ಗುರು (36), ರೋಹಿತ್ ಅಲಿಯಾಸ್ ಗೆದ್ವಾ (20), ನಂಜೇಗೌಡ ಅಲಿಯಾಸ್ ಕಾಶಿ (19) ಹಾಗೂ ಮಣಿಗೆರೆ ಗ್ರಾಮದ ಮಾದೇಶ ಅಲಿಯಾಸ್ ಮಾದ (20) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಖ್ಯಾಂಶಗಳು
- ಹೆಂಡತಿಯ ಎದುರು ಶ್ರೀಮಂತನೆಂದು ಪೋಸ್ ಕೊಡಲು ಹಗಲು-ರಾತ್ರಿ ಸರಗಳ್ಳತನ ಮಾಡುತ್ತಿದ್ದ ಕಿಂಗ್‌ಪಿನ್ ಗುರುಪ್ರಸಾದ್.
- ಒಂದು ವರ್ಷದ ಹಿಂದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕಳ್ಳತನದ ದಂಧೆ ಬಿಟ್ಟು ಸೈಲೆಂಟ್ ಆಗಿದ್ದ ಮುಖ್ಯ ಆರೋಪಿ.
- ಮಾರ್ಚ್ 30ರಂದು ಸಹಚರರು ನಡೆಸಿದ ಒಂಟಿ ಮಹಿಳೆಯ ಸರಗಳ್ಳತನದ ಸಿಸಿಟಿವಿ ಜಾಡು ಹಿಡಿದಾಗ ಹಳೆಯ ರಹಸ್ಯ ಬಯಲು.
ಸಿಸಿಟಿವಿ ದೃಶ್ಯದಿಂದ ಸಿಕ್ಕಿಬಿದ್ದ ಖದೀಮರು
ಮುಖ್ಯ ಆರೋಪಿ ಗುರುಪ್ರಸಾದ್ ಪತ್ನಿಗೆ ತಾನು ಕೋಟ್ಯಧಿಪತಿ ಎಂಬಂತೆ ತೋರಿಸಿಕೊಳ್ಳಲು ಈ ಕಳ್ಳತನದ ಹಾದಿ ಹಿಡಿದಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿನ ಬಳಿಕ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದ ಗುರುಪ್ರಸಾದ್, ಕಳ್ಳತನದ ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಸುಮ್ಮನಾಗಿದ್ದ.
ಆದರೆ ಆತನ ಗ್ಯಾಂಗ್‌ನಲ್ಲಿದ್ದ ಇನ್ನುಳಿದ ಸಹಚರರು ಮಾತ್ರ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರು. ಕಳೆದ ಮಾರ್ಚ್ 30ರಂದು ಜಮೀನಿನ ಬಳಿ ಒಂಟಿಯಾಗಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಟಾರ್ಗೆಟ್ ಮಾಡಿ ಈ ಗ್ಯಾಂಗ್ ಚಿನ್ನದ ಸರವನ್ನು ದೋಚಿ ಪರಾರಿಯಾಗಿತ್ತು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳ ಜಾಡು ಹಿಡಿದು ಮೊದಲು ರೋಹಿತ್ ಮತ್ತು ನಂಜೇಗೌಡನನ್ನು ವಶಕ್ಕೆ ಪಡೆದರು. ಪೊಲೀಸರ ಚಾರಣೆ ವೇಳೆ ಈ ಇಬ್ಬರು ಆರೋಪಿಗಳು, ಒಂದು ವರ್ಷದ ಹಿಂದೆ ತಾವೆಲ್ಲರೂ ಗುರುಪ್ರಸಾದ್ ನೇತೃತ್ವದಲ್ಲಿ ನಡೆಸಿದ್ದ ಸಾಲು ಸಾಲು ಕಳ್ಳತನಗಳ ಜಾತಕವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮಂಡ್ಯ: ನಾಗಮಂಗಲ ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ
ಮಂಡ್ಯ ಮತ್ತು ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇವರು ಸುಮಾರು 16ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ನಾಲ್ಕೂ ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




