ಮಂಡ್ಯ: ಮಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ
ಒಂದೇ ವಾರ ಮಂಡ್ಯದಲ್ಲಿ ಇಬ್ಬರು ಮಕ್ಕಳ ಬಲಿಯಾಗಿದೆ. ಸೋಮವಾರವಷ್ಟೇ ಸಂಚಾರಿ ಪೊಲೀಸರ ಎಡವಟ್ಟಿನಿಂದ ಮಗುವೊಂದು ಮೃತಪಟ್ಟಿತ್ತು. ಇದೀಗ ಕಾಲು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 7 ವರ್ಷದ ಬಾಲಕಿ ಮೃತಪಟ್ಟಿದ್ದು, ಮಿಮ್ಸ್ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಆ ಮಗು ಸಾವಿಗೆ ಕಾರಣ ಏನು? ಮಗು ಸಾವಿನ ಬಗ್ಗೆ ಪೋಷಕರು ಹೇಳುವುದೇನು? ವೈದ್ಯರು ಕೊಡುವ ಕಾರಣ ಏನು? ಇಲ್ಲಿದೆ ವಿವರ.

ಮಂಡ್ಯ, ಜೂನ್ 1: ಮಂಡ್ಯ ಜಿಲ್ಲೆಯ ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿ ಪುತ್ರಿ ಸಾನ್ವಿ (7) ಮೃತಪಟ್ಟಿದ್ದು, ಮಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಮಾಡಲಾಗಿದೆ. ಮೇ 29 ರಂದು ಮನೆಯಲ್ಲಿದ್ದ ಟೈಲ್ಸ್ ಒಂದು ಬಾಲಕಿ ಪಾದದ ಮೇಲೆ ಬಿದ್ದಿತ್ತು. ಆಗ, ಬಾಲಕಿಯ ಕಾಲು ಮುರಿತವಾಗಿತ್ತು. ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಪೋಷಕರು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ (MIMS Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಮೂಳೆ ಸರಿಯಾಗಬೇಕು ಎಂದರೆ ಆಪರೇಷನ್ ಮಾಡಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸಾನ್ವಿಗೆ 29ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯೂ ಮಾತನಾಡಿದ್ದಳು. ತಾನು ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರಿಗೂ ಧೈರ್ಯ ಹೇಳಿದ್ದಾಳೆ. ಆದರೆ, ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ, ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮಿಮ್ಸ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಪೋಷಕರ ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಕಿಗೆ ಆಪರೇಷನ್ ಆದ ನಂತರ ಸರಿಯಾದ ಚಿಕಿತ್ಸೆ ನೀಡಿಲ್ಲ. ವೈದ್ಯರ ಬದಲಾಗಿ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಗು ಮೃತಪಟ್ಟಿದ್ದರೆ ಆ ವಿಚಾರವನ್ನು ಪೋಷಕರಿಗೆ ಮೊದಲು ವಿಚಾರ ತಿಳಿಸಬೇಕಾಗಿತ್ತು. ಆದರೆ, ಅದರ ಬದಲು ಪೊಲೀಸರಿಗೆ ವಿಚಾರ ತಿಳಿಸಿ, ನಂತರ ಪೋಷಕರಿಗೆ ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೋಷಕರ ಆರೋಪ ತಳ್ಳಿ ಹಾಕಿದ ಆಸ್ಪತ್ರೆ
ಆಸ್ಪತ್ರೆಯ ವೈದ್ಯರು ಪೋಷಕರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮೊದಲು ಪರೀಕ್ಷೆ ಮಾಡಿದ ನಂತರ ಆಪರೇಷನ್ ಮಾಡಲಾಗಿದೆ. ಆದರೆ, ಅಪರೇಷನ್ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ರಕ್ತ ಪರೀಕ್ಷೆ ಮಾಡಿದಾಗ ಮಗುವಿನ ಪ್ಲೇಟ್ಲೇಟ್ ಕಡಿಮೆಯಾಗಿತ್ತು, ಜೊತೆಗೆ ಸೋಂಕು ಆಗಿ ಬಹು ಅಂಗಾಂಗ ವೈಪಲ್ಯವಾಗಿ ಮಗು ಮೃತಪಟ್ಟಿದೆ. ವೈದ್ಯರು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಿಲ್ಲ ಎಂದು ವೈದ್ಯಾಧಿಕಾರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.
ಪೋಷಕರ ಜೊತೆ ಹೋರಾಟಕ್ಕೆ ಇಳಿದಿರುವ ಸಂಘಟನೆಗಳ ಮುಖಂಡರು ಮಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ಅಧಿಕಾರಿಗಳ ತಂಡ ಪೋಷಕರು, ಪ್ರತಿಭಟನಾಕಾರರ ಮನವೊಲಿಕೆಗೆ ಹರಸಾಹಸ ಪಟ್ಟಿದೆ. ಈ ವೇಳೆ ವೈದ್ಯರನ್ನು ಸಮರ್ಥಿಸಿಕೊಂಡ ಮಿಮ್ಸ್ ನಿರ್ದೇಶಕ ನರಸಿಂಹಮೂರ್ತಿ ಅವರನ್ನು ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಮಂಡ್ಯ ರಸ್ತೆ ಅಪಘಾತದಲ್ಲಿ ಮಗುವಿನ ಸಾವು, ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ
ಪ್ರತಿಭಟನಾಕಾರರ ಪಟ್ಟಿಗೆ ಒಪ್ಪಿದ ಎಸ್ಪಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸುವುದು, ಪೋಷಕರ ದೂರು ಆಧರಿಸಿ ಪ್ರಕರಣ ದಾಖಲಿಸುವ ಹಾಗೂ ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನದ ಭರವಸೆ ನೀಡಿದರು. ನಂತರ ಪೋಷಕರ ಒಪ್ಪಿಗೆ ಪಡೆದು ಮೈಸೂರಿಗೆ ಮೃತ ಸಾನ್ವಿ ಮೃತ ದೇಹ ರವಾನಿಸಲಾಯಿತು.
ಕಳೆದ ನಾಲ್ಕು ದಿನದ ಹಿಂದೆ ಪೊಲೀಸರ ಎಡವಟ್ಟಿಗೆ ಪುಟ್ಟ ಜೀವ ಬಲಿಯಾಗಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಪುಟ್ಟ ಬಾಲಕಿ ಜೀವ ಹೋಗಿರುವುದು ದುರಂತವೇ ಸರಿ.







