ಮತದಾರರಿಗಿಂತ ಕಂಪನಿನೇ ಹೆಚ್ಚಾಯ್ತ? ಗೆದ್ದ 7 ತಿಂಗಳಲ್ಲಿ ನಾಲ್ಕನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕನೇ ಬಾರಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ದರ್ಶನ್ ಪುಟ್ಟಣಯ್ಯ ಪದೇ ಪದೇ ಅಮೆರಿಕಾ ಪ್ರವಾಸಕ್ಕೆ ಕೈಗೊಳ್ಳುತ್ತಿರುವುದು ಬಿಸಿನೆಸ್ ಮಾಡುವುದಕ್ಕಾಗಿ ಎಂದು ಮತದಾರರು ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯ, ಜ.04: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಅವರು ಮತ್ತೆ ಅಮೆರಿಕಾಗೆ ಹಾರಿದ್ದಾರೆ. ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕನೇ ಬಾರಿ ಅಮೆರಿಕ (America) ಪ್ರವಾಸ ಕೈಗೊಂಡಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಆಲಿಸಬೇಕಿದ್ದ, ಕಾರ್ಯಕರ್ತರ ಜೊತೆ ನಿಲ್ಲಬೇಕಿದ್ದ ಶಾಸಕ ಹೀಗೆ ಪದೇ ಪದೇ ಅಮೆರಿಕಾಗೆ ಹೋಗುತ್ತಿರುವ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 23ರಂದು ವಿದೇಶಕ್ಕೆ ತೆರಳಿರೊ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನವರಿ 10ರಂದು ವಾಪಸ್ಸು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ವಿಧಾನಸಭೆ ಚುನಾವಣೆಗೂ ಮೊದಲು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಾಟ ಮಾಡಿ ಹುಟ್ಟೂರಲ್ಲೇ ಇರುವುದಾಗಿ ದರ್ಶನ್ ಪುಟ್ಟಣಯ್ಯ ಭರವಸೆ ನೀಡಿದ್ದರು. ಅಲ್ಲದೆ ಈ ಹಿಂದೆ ಅಮೆರಿಕಾಗೆ ಹೋಗಿ ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ದರು. ಆದರೆ ಇದೀಗ ಮತ್ತೆ ಅಮೆರಿಕಾಗೆ ಹಾಕಿದ್ದಾರೆ. ಚುನಾವಣೆ ಗೆದ್ದ ಕೇವಲ ಏಳು ತಿಂಗಳಲ್ಲಿ ಇದೀಗ ನಾಲ್ಕನೇ ಬಾರಿ ವಿದೇಶಕ್ಕೆ ತೆರಳಿದ್ದಾರೆ. ಪದೇ ಪದೇ ಅಮೆರಿಕಾಗೆ ತೆರಳುತ್ತಿರುವ ಶಾಸಕರ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ: ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ ಜನರು
ದರ್ಶನ್ ಪುಟ್ಟಣಯ್ಯ ಪದೇ ಪದೇ ಅಮೆರಿಕಾ ಪ್ರವಾಸಕ್ಕೆ ಕೈಗೊಳ್ಳುತ್ತಿರುವುದು ಬಿಸಿನೆಸ್ ಮಾಡುವುದಕ್ಕಾಗಿ ಎಂದು ಮತದಾರರು ಆಕ್ರೋಶ ಹೊರ ಹಾಕಿದ್ದಾರೆ. ಶಾಸಕರು ರೈಲಿನಲ್ಲಿ, ಆಟೋದಲ್ಲಿ ಪ್ರಯಾಣ ಮಾಡ್ತಾರೆ ಎಂದು ಫೋಟೋ ಹಾಕೋರು ಇಂದು ವಿಮಾನದಲ್ಲಿ ಓಡಾಡೋದ್ನೂ ಹಾಕಬೇಕಲ್ವಾ? ಅಮೆರಿಕಾದಲ್ಲಿ ಬಿಸಿನೆಸ್ ಮಾಡೊ ಬದಲು ಆ ಕಂಪನಿಯನ್ನ ಇಲ್ಲೆ ಸ್ಥಾಪಿಸಿದ್ರೆ ಇಲ್ಲಿಯವರಿಗೂ ಕೆಲಸ ಕೊಟ್ಟಂಗೆ ಆಗುತ್ತೆ. ಶಾಸಕರು ಇಲ್ಲೇ ಇದ್ದಂಗೆ ಆಗುತ್ತೆ. ಜನರ ಸಮಸ್ಯೆ ಕೇಳಬೇಕಾದವರು ಪದೇ ಪದೇ ಅಮೆರಿಕಾಗೆ ಹೋದ್ರೆ ನಮ್ಮ ಸಮಸ್ಯೆ ಯಾರ ಹತ್ರ ಹೇಳ್ಕೊಬೇಕು ಎಂದು ಮೇಲುಕೋಟೆ ಕ್ಷೇತ್ರದ ಮತದಾರರು ಆಕ್ರೋಶ ಹೊರ ಹಾಕಿದ್ದಾರೆ. ತೀವ್ರ ಬರದ ನಡುವೆ ಪದೇ ಪದೇ ವಿದೇಶಿ ಪ್ರಯಾಣ ಮಾಡುತ್ತಿರೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ