
ಮಂಡ್ಯ, ಸೆಪ್ಟೆಂಬರ್ 03: ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್ಐ ಸವಿತಾ ಅವರಿಗೆ ಹಲ್ಲೆ ನಡೆಸಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಗೆ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶ್ರೀರಂಗಪಟ್ಟಣದ ನ್ಯಾಯಾಲಯ ಗುರುವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಅಧಿಕೃತ ಪ್ರಕರಣ ದಾಖಲಾಗಿತ್ತು. ಆದರೆ, ಐಶ್ವರ್ಯರನ್ನು ಪೊಲೀಸರು ಬಂಧಿಸಿರಲಿಲ್ಲ. ಕೇವಲ ವಿಚಾರಣೆ ಅಷ್ಟೇ ಮಾಡಲಾಗಿತ್ತು. ಈ ಮಧ್ಯೆ ಬಂಧನದ ಭೀತಿಯಲ್ಲಿದ್ದ ಐಶ್ವರ್ಯ, ಕಾನೂನು ರಕ್ಷಣೆ ಕೋರಿ ಶ್ರೀರಂಗಪಟ್ಟಣದ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ವಾದ-ಪ್ರತಿವಾದಗಳನ್ನ ಆಲಿಸಿದ ನ್ಯಾಯಾಲಯ, ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲಿನ ಹಲ್ಲೆಯ ಗಂಭೀರತೆಯನ್ನು ಪರಿಗಣಿಸಿ ಐಶ್ವರ್ಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯದಿಂದ ಜಾಮೀನು ಸಿಗದ ಹಿನ್ನೆಲೆ, ಇದೀಗ ಪೊಲೀಸರು ಐಶ್ವರ್ಯರನ್ನು ಬಂಧಿಸುತ್ತಾರಾ ಅಥವಾ ಮುಂದಿನ ಕಾನೂನು ಕ್ರಮವೇನು ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಪುತ್ರಿ, ಪೊಲೀಸ್ ಅಧಿಕಾರಿಯ ಪತ್ನಿ ಐಶ್ವರ್ಯ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿ ಸುದ್ದಿ ಆಗಿದ್ದರು. ಇತ್ತೀಚೆಗೆ ಭೀಮನ ಅಮವಾಸ್ಯೆ ದಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿಯ ದರ್ಶನಕ್ಕೆ ಐಶ್ವರ್ಯ ತನ್ನ ಮಕ್ಕಳ ಜೊತೆ ಬಂದಿದ್ದರು.
ಇದನ್ನೂ ಓದಿ: ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಐಶ್ವರ್ಯ
ಅಮವಾಸ್ಯೆ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದ ಕಾರಣ ದೇವಿಯ ದರ್ಶನ ಮಾಡಲು ಪರದಾಟ ನಡೆಸಿ ಹೇಗೋ ದೇವಾಲಯ ಆವರಣಕ್ಕೆ ಪ್ರವೇಶ ಮಾಡಿದ್ದಾರೆ. ಈ ವೇಳೆ ತನ್ನ ಜೊತೆ ಇಬ್ಬರು ಮಕ್ಕಳಿದ್ದಾರೆ. ತನ್ನನ್ನ ನೇರವಾಗಿ ಗರ್ಭಗುಡಿಗೆ ಬಿಡುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಸವಿತಾ ಅವರನ್ನ ಕೇಳಿದ್ದರು. ಆದರೆ ಐಶ್ವರ್ಯ ಮನವಿಗೆ ಪಿಎಸ್ಐ ಸ್ಪಂದಿಸಲಿಲ್ಲವಂತೆ. ಇದೇ ವೇಳೆ ಮಫ್ತಿಯಲ್ಲಿ ಕರ್ತವ್ಯದಲ್ಲಿ ಇನ್ಸ್‌ಪೆಕ್ಟರ್ ಗರ್ಭಗುಡಿಗೆ ಪ್ರವೇಶ ಮಾಡಿದನ್ನ ಪ್ರಶ್ನಿಸಿದ್ದು, ಸವಿತಾರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಬಗ್ಗೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ದೂರು ಹಿನ್ನೆಲೆ ಎಫ್ಐಆರ್ ದಾಖಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Thu, 3 September 26