- TV9 Kannada Photo gallery Cricket photos IPL 2027: Tilak Varma and Jasprit Bumrah candidates for MI captaincy
ಇಬ್ಬರ ನಡುವೆ ಪೈಪೋಟಿ: ಯಾರಾಗ್ತಾರೆ ಮುಂಬೈ ಇಂಡಿಯನ್ಸ್ ನಾಯಕ?
IPL 2027: ಮುಂಬೈ ಪಲ್ಟನ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್! ಮುಂಬೈ ಇಂಡಿಯನ್ಸ್ ಅಂಗಳದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಸಂಚಲನ ಸೃಷ್ಟಿಯಾಗಿದೆ. ಕಳೆದ ಸೀಸನ್‌ನ ತೀವ್ರ ನಿರಾಶೆಯ ಬಳಿಕ ಫ್ರಾಂಚೈಸಿ ಈಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಅದರಂತೆ ಐಪಿಎಲ್ 2027ರಲ್ಲಿ ಮುಂಬೈ ಇಂಡಿಯನ್ಸ್ ಪಡೆಯನ್ನು ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.
Updated on:Sep 02, 2026 | 1:07 PM

ಐಪಿಎಲ್ 2027 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಬದಲಾಗುವುದು ಬಹುತೇಕ ಖಚಿತವಾಗಿದೆ. ಕಳೆದ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಿರ್ಧರಿಸಿದ್ದು, ಅವರ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಮುಂದಾಗಿದೆ. (PC: IPL)

ಕಳೆದ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆಡಿದ ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಗೆಲ್ಲಲಷ್ಟೇ ಶಕ್ತವಾಗಿದ್ದ ಮುಂಬೈ, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದು ತೀವ್ರ ನಿರಾಶೆ ಮೂಡಿಸಿತ್ತು. (PC: IPL)

ಹೀಗಾಗಿ, ಹಾರ್ದಿಕ್ ಪಾಂಡ್ಯ ಅವರನ್ನು ಕೇವಲ ಒಬ್ಬ ಆಟಗಾರನಾಗಿ ಮಾತ್ರ ತಂಡದಲ್ಲಿ ಉಳಿಸಿಕೊಂಡು, ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮ್ಯಾನೇಜ್‌ಮೆಂಟ್ ಗಂಭೀರ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. (PC: IPL)

ಇತ್ತ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಮತ್ತೆ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಆದರೆ, ತಂಡದ ಹೊಸ ನಾಯಕ ಹಾಗೂ ಕೋಚ್‌ಗಳ ಆಯ್ಕೆಯ ಚರ್ಚೆಗಳಲ್ಲಿ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಅಂದರೆ, ರೋಹಿತ್ ಶರ್ಮಾ ಅವರ ಮಾರ್ಗದರ್ಶನದಲ್ಲೇ ಮುಂಬೈ ಇಂಡಿಯನ್ಸ್ ಶೀಘ್ರದಲ್ಲೇ ಹೊಸ ನಾಯಕನನ್ನು ಘೋಷಿಸಲಿದೆ. ಸದ್ಯ ಈ ನಾಯಕತ್ವದ ರೇಸ್‌ನಲ್ಲಿ ಪ್ರಮುಖವಾಗಿ ಇಬ್ಬರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಅವರೆಂದರೆ... (PC: IPL)

ಜಸ್ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ನಾಯಕತ್ವದ ರೇಸ್‌ನಲ್ಲಿ ಅತ್ಯಂತ ಬಲಿಷ್ಠ ಅಭ್ಯರ್ಥಿಯಾಗಿದ್ದಾರೆ. ಬುಮ್ರಾ ತಂಡದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ಆಟಗಾರರಲ್ಲಿ ಒಬ್ಬರು. ಈಗಾಗಲೇ ಭಾರತ ಟೆಸ್ಟ್ ತಂಡವನ್ನು ಹಾಗೂ ಐಪಿಎಲ್ನಲ್ಲಿ ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಅನುಭವ ಅವರಿಗಿದೆ. ಇವರ ನಾಯಕತ್ವಕ್ಕೆ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಸಂಪೂರ್ಣ ಬೆಂಬಲ ಸಿಗುವುದು ಖಚಿತ. (PC: IPL)

ತಿಲಕ್ ವರ್ಮಾ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ರೇಸ್‌ನಲ್ಲಿ ಕೇಳಿ ಬಂದ ಮತ್ತೊಂದು ಹೆಸರು ತಿಲಕ್ ವರ್ಮಾ. ಕೇವಲ 23 ವರ್ಷದ ಯುವ ಆಟಗಾರ ತಿಲಕ್ ವರ್ಮಾ ಅವರನ್ನು ನಾಯಕನನ್ನಾಗಿ ಮಾಡುವುದು ಮುಂಬೈ ಇಂಡಿಯನ್ಸ್ ಪಾಲಿಗೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ದೂರದರ್ಶಿತ್ವದ ನಿರ್ಧಾರವಾಗಬಲ್ಲದು. ತಿಲಕ್ ವರ್ಮಾ ಪ್ರಸ್ತುತ ಟೀಮ್ ಇಂಡಿಯಾದ ಟಿ20 ತಂಡದ ಉಪನಾಯಕನಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ದೇಶಿ ಕ್ರಿಕೆಟ್‌ನಲ್ಲೂ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹೀಗಾಗಿಯೇ ಭವಿಷ್ಯದ ದೃಷ್ಟಿಯಿಂದ ಮುಂಬೈ ಇಂಡಿಯನ್ಸ್ ತಿಲಕ್ ವರ್ಮಾಗೆ ಕ್ಯಾಪ್ಟನ್ ಪಟ್ಟ ನೀಡಿದರೂ ಅಚ್ಚರಿಪಡಬೇಕಿಲ್ಲ. (PC: IPL)

ಪ್ರಸ್ತುತ ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ , ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.
Published On - 1:03 pm, Wed, 2 September 26




