ಮಂಗಳೂರು, ಅಕ್ಟೋಬರ್ 25: ಕಡಲನಗರಿ ಮಂಗಳೂರಿನಲ್ಲಿ ರೌಡಿಶೀಟರ್‌ಗಳು (rowdy sheeter) ಮತ್ತೆ ಬಾಲ ಬಿಚ್ಚೋದಕ್ಕೆ ಶುರುಮಾಡಿದ್ದಾರೆ. ನಡುರಾತ್ರಿ ಯುವಕರ ಗುಂಪಿನ ನಡುವೆ ತಲ್ವಾರ್ ಕಾಳಗ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಮಾರಣಾಂತಿಕ ಗಾಯವಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೆ ಡಿ.ವೈ.ಎಸ್ಪಿ ನೇತ್ರತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಹಲ್ಲೆ ನಡೆಸಿದ ಆರೋಪಿಗಳೆಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್‌ಗಳ ತಲ್ವಾರ್ ವಾರ್
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ಮುಂದೆ ಇದು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಇಲಾಖೆಯೊಳಗೆ ಚರ್ಚಿಸುತ್ತೇವೆ ಎಂದು ದಕ್ಷಿಣ ಕನ್ನಡ ಎಸ್.ಪಿ ಯತೀಶ್.ಎನ್ ಹೇಳಿದ್ದಾರೆ.
ಹೌದು. ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಮಂಗಳವಾರ ತಡರಾತ್ರಿ ತಲ್ವಾರ್ ಕಾಳಗ ನಡೆದಿದೆ. ಇಲ್ಲಿ ತಸ್ಲೀಮ್ ಹಾಗೂ ತಂಡದ ಮೇಲೆ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಮಾರಕ ದಾಳಿ ನಡೆದಿದೆ. ಹಳೇ ದ್ವೇಷದಿಂದ ತಸ್ಲೀಮ್ ಹಾಗೂ ತಂಡವನ್ನು ಕರೆಸಿ ತಲವಾರಿನಿಂದ ದಾಳಿ ಮಾಡಲಾಗಿದೆ.
ಅಸಲಿಗೆ ಈ ಎರಡು ತಂಡದ ಸದಸ್ಯರು ಮೊದಲು ಜೊತೆಯಲ್ಲೇ ಇದ್ದರು. ಈ ಎರಡು ತಂಡದ ಸದಸ್ಯರ ಮೇಲೆ ಕೊಲೆ ಪ್ರಕರಣ ಸೇರಿದಂತೆ ಸಾಕಷ್ಟು ಕೇಸ್ ಇದೆ. ಇಲ್ಲಿ ತಸ್ಲೀಮ್ ಹಾಗೂ ಮನ್ಸೂರ್ ತಂಡದ ನಡುವೆ ವಾರದ ಹಿಂದೆ ಭಿನ್ನಾಭಿಪ್ರಾಯ ಬಂದಿದೆ. ಈ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿ ತಲ್ವಾರ್ ದಾಳಿವರೆಗೂ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳೆ ಕಿಡ್ನ್ಯಾಪ್: ಯುವಕನಿಂದ ದೂರು
ಮಂಗಳವಾರ ತಡರಾತ್ರಿ ತಸ್ಲೀಮ್ ಹಾಗೂ ಸ್ನೇಹಿತರು ಮಾತನಾಡುತ್ತಿದ್ದ ವೇಳೆ ತಸ್ಲೀಮ್‌ಗೆ ಕರೆಯೊಂದು ಬಂದಿತ್ತು. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದಾನೆ. ಈ ವೇಳೆ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲವಾರಿನಿಂದ ತಸ್ಲೀಮ್ ಬಲಗಾಲು, ಬಲಗೈಗೆ ಕಡಿದಿದ್ದಾರೆ. ಇನ್ನೊರ್ವ ಮಹಮ್ಮದ್ ಶಾಕೀರ್‌ಗೂ ಅದೇ ರೀತಿ ತಲವಾರಿನಿಂದ ತಂಡ ಕಡಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದೆ. ಆದ್ರೆ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈ ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಈ ರೀತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಭಯದ ವಾತವರಣವನ್ನುಂಟು ಮಾಡುವ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.