ರಾಮನಗರ: ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಮಳೆಯಾಗಿದ್ದು, ಅಕಾಲಿಕ ಮಳೆ ರಾಮನಗರ ಜಿಲ್ಲೆಯ ಮಾವು ಬೆಳೆಗಾರರ ನೆಮ್ಮದಿ ಕಸಿದಿದೆ. ಈ ಬಾರಿ ಮುಂಗಾರು ಫಲಪ್ರದವಾಗಿದ್ದು, ಮಾವಿನ ಮರಗಳು ಮೈ ತುಂಬಾ ಹೂವು ಹೊದ್ದು ನಿಂತಿದ್ದ ಕೆಲವು ಕಡೆ ಪೀಚು ಗಾತ್ರದ ಮಾವಿನಕಾಯಿಗಳು ಅರಳಿವೆ. ಹೀಗಾಗಿ ಈ ಬಾರಿ ಉತ್ತಮ ಫಸಲು ಸಿಗುವ ನಿರೀಕ್ಷೆ ಜಿಲ್ಲೆಯ ಮಾವು ಬೆಳೆಗಾರರದ್ದಾಗಿತ್ತು. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಹೂವಿನ ಜೊತೆಗೆ ಪೀಚು ಕಾಯಿಯೂ ಉದುರುವ ಆತಂಕ ರೈತರಿಗೆ ಎದುರಾಗಿದೆ.
ಈ ಬಾರಿ ನವೆಂಬರ್-ಡಿಸೆಂಬರ್‌ವರೆಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಕಡೆ ಕಾಯಿ ಸಹ ಕಚ್ಚಿದ್ದವು. ಆದರೆ ಈಗ ಬೀಳುತ್ತಿರುವ ಮಳೆಯಿಂದ ಕಾಯಿ ಉದುರುವ ಸಾಧ್ಯತೆ ಹೆಚ್ಚಾಗಿದ್ದು, ಮಳೆ ಹೀಗೆಯೇ ಮುಂದುವರಿದರೇ ಶೇ 80ರಷ್ಟು ಬೆಳೆ ಹಾಳಾಗುತ್ತದೆ. ಅದರಲ್ಲೂ ಬದಾಮಿ ತಳಿಯ ಮಾವು ಉಳಿಯುವುದಿಲ್ಲ ಎಂಬುದು ರೈತರ ಆತಂಕ. ಇನ್ನು ಈಗ ಸುರಿಯುತ್ತಿರುವ ಮಳೆ ತೀರ ಅಕಾಲಿಕವಾಗಿದ್ದು, ಹಿಂದೆ ಎಂದೂ ಜನವರಿಯಲ್ಲಿ ಈ ರೀತಿ ಅಕಾಲಿಕ ಮಳೆ ಆಗಿರಲಿಲ್ಲ.
ಜನವರಿ-ಫೆಬ್ರುವರಿಯಲ್ಲಿ ಬೀಳುವ ಇಬ್ಬನಿಯ ತೇವಾಂಶವೇ ಮಾವಿನ ಮರಗಳಿಗೆ ಸಾಕಿತ್ತು. ಅಂದ ಹಾಗೆ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ ಮಾವು ಬೆಳೆಯುವಲ್ಲಿ ಎರಡನೇ ಸ್ಥಾನದಲ್ಲಿದ್ದು, ಸುಮಾರು 32 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ರಾಜ್ಯದ ಮಾರುಕಟ್ಟೆಗೆ ಮೊದಲು ರಾಮನಗರ ಜಿಲ್ಲೆಯಿಂದಲೇ ಮಾವು ಬರುವುದಾಗಿದ್ದು, ವಾರ್ಷಿಕ 25 ಲಕ್ಷ ಟನ್ ನಷ್ಟು ಮಾವನ್ನ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಸುಮಾರು 400 ಕೋಟಿ ವಹಿವಾಟು ಮಾವು ಜಿಲ್ಲೆಯಲ್ಲಿ ನಡೆಯುತ್ತದೆ.
ಆದರೆ ಕಳೆದ ಬಾರಿ ಹೆಚ್ಚಾದ ಮಳೆ ಹಾಗೂ ಮಾರಾಟ ಸಮಯದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಮಾವು ಕೇಳುವವರೇ ಇಲ್ಲದಂತೆ ಆಗಿತ್ತು. ಇನ್ನು ಈ ಬಾರಿ ಉತ್ತಮ ಬೆಳೆ ಬಂದು, ಮಾವು ನಮ್ಮ ಕೈ ಹಿಡಿಯಲಿದೆ ಎಂದುಕೊಂಡಿದ್ದ ರೈತರಿಗೆ ಪ್ರಾರಂಭದಲ್ಲೇ ಬೂದು ರೋಗ ಸಂಕಷ್ಟ ತಂದು ಒಡ್ಡಿತ್ತು. ಅದರ ಬೆನ್ನಲ್ಲೇ ಈಗ ಅಕಾಲಿಕ ಮಳೆ ಮಾವು ಬೆಳೆಗಾರರನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಔಷದೋಪಚಾರ ಏನು?
ಅಕಾಲಿಕ ಮಳೆಯಿಂದಾಗಿ ಮಾವಿನ ಹೂವು ತೆನೆ ಕಪ್ಪಾಗುವುದು ಹಾಗೂ ಬೂದಿ ರೋಗ ಬರುವ ಸಾಧ್ಯತೆ ಇದೆ. ಅದರ ನಿಯಂತ್ರಣಕ್ಕೆ ಬೆಳೆಗಾರರು ಹೆಕ್ಸಾಕೊನಾಜೋಲ್ 2 ಮಿ.ಲೀ. ಅಥವಾ ಥಯೋಫಿನೆಟ್ ಮಿಡೈಲ್ 1 ಗ್ರಾಂ ಅಥವಾ ಕಾರ್ಬನ್‌ಡಾಜಿಮ್ 1.5 ಗ್ರಾಂ ಅಥವಾ ಟ್ರೈಸಕ್ಲೊಜೋಲ್ 0.25 ಗ್ರಾಂ ಈ 4ರಲ್ಲಿ ಒಂದು ರಾಸಾಯನಿಕ ಔಷಧವನ್ನು ಪ್ರತಿ 1 ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ನಾವು ಸಾಕಷ್ಟು ನಿರೀಕ್ಷೆಯಲ್ಲಿ ಇದ್ದೇವು. ಆದರೆ ಅಕಾಲಿಕ ಮಳೆ ನಮ್ಮ ಬದುಕನ್ನ ಅತಂತ್ರ ಮಾಡುತ್ತಿದೆ. ಇದೇ ರೀತಿ ಮಳೆ ಮುಂದುವರೆದರೇ ಸಂಪೂರ್ಣ ಮಾವು ಬೆಳೆ ಹಾನಿಯಾಗಲಿದೆ ಎಂದು ಮಾವು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಸಿದ್ಧರಾಜು ಹೇಳಿದ್ದಾರೆ.
ಮಾವು ಹೂ ಬಿಟ್ಟಿರುವ ಕಾರಣ ಈ ಅವಧಿಯಲ್ಲಿ ಮಳೆಯ ಅವಶ್ಯಕತೆ ಇರಲಿಲ್ಲ. ತೇವಾಂಶ ಹೆಚ್ಚಾದಷ್ಟು ಹೂವು ಉದುರುವ ಜೊತೆಗೆ ಅದರಲ್ಲಿ ಬೂದಿ ರೋಗ ಹರಡುವ ಸಾಧ್ಯತೆ ಇದೆ. ಆಗ ರೈತರು ಅಗತ್ಯ ಔಷದೋಪಚಾರ ಮಾಡಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮುನೇಗೌಡ ಅಳಲು ತೋಡಿಕೊಂಡಿದ್ದಾರೆ.