ಹಣ ಒಯ್ಯಲು ಕರ್ನಾಟಕಕ್ಕೆ ಆಗಮಿಸಿದ ಕೆಸಿ ವೇಣುಗೋಪಾಲ್: ವಿಪಕ್ಷಗಳ ಆರೋಪಕ್ಕೆ ಎಂಬಿ ಪಾಟೀಲ್ ತಿರುಗೇಟು
ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ದಿಢೀರ್ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಹಣ ಒಯ್ಯಲು ಬರುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್, ಸುಮ್ಮಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ವಿಜಯಪುರ, ಅ.17: ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಅವರು ದಿಢೀರ್ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಹಣ ಒಯ್ಯಲು ಬರುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್ (M.B.Patil), ಸುಮ್ಮಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬೆಳವಣಿಗೆ ಬಗ್ಗೆ ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವೇಣುಗೋಪಾಲರನ್ನ ನಾನು ಬಾಳ ಹತ್ತಿರದಿಂದ ನೋಡಿದ್ದೇನೆ. ಅವರು ಬಹಳ ಪ್ರಮಾಣಿಕ ವ್ಯಕ್ತಿ, ಭದ್ದತೆ ಇದ್ದಂತ ವ್ಯಕ್ತಿ. ಸುಖಾಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡಲು ವೇಣುಗೋಪಾಲ್ ಆಗಮಿಸಿದ್ದಾರೆ ಎಂದು ವಿರೋಧಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ನಮ್ಮ ಪಕ್ಷದಲ್ಲಿ ಬಂಡಾಯ ಎಲ್ಲಿದೆ ಎಂದು ಪ್ರಶ್ನಿಸಿದರು.
ಸಚಿವ ಸತೀಶ್ ಜಾರಕಿಹೊಳಿ 20 ಶಾಸಕರನ್ನು ಸೇರಿಸಿ ಸಭೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಮೊನ್ನೆ ನನ್ನನ್ನು ಭೇಟಿಯಾಗಿದ್ದಾರೆ. ಆ ವೇಳೆ ವಿವಿಧ ವಿಚಾರಗಳ ಕುರಿತು ಅರ್ಧ ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬಂಡಾಯವಿಲ್ಲ ಎಂದರು.
ಬಂಡಾಯ ಶಮನ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಶಾಸಕರ ಸಭೆ ಮಾಡುವುದಾಗಿ ಹೈಕಮಾಂಡ್ಗೆ ಜಾರಕಿಹೋಳಿ ಹೇಳಿದ್ದಾರೆಂಬ ಸುದ್ದಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು ಈ ರೀತಿ ಕ್ರಿಯೇಟ್ ಮಾಡಿದ್ದಕ್ಕೆ ಜಾರಕಿಹೊಳಿ ಹಾಗೆ ಹೇಳಿರಬಹುದು. ಸ್ನೇಹಿತರೆಲ್ಲ ಸೇರಿ ಎಲ್ಲೂ ಹೋಗಬಾರದಾ? ಮಾಧ್ಯಮದವರೂ ಸೇರಿ ಎಲ್ಲಿಗೂ ಹೋಗಲ್ವಾ? ಅದೇ ರೀತಿ ಶಾಸಕರು ಕೂಡಿಕೊಂಡು ಊಟಕ್ಕೆ ಕುಳಿತರೆ ಎಲ್ಲಿಗಾದರೂ ಹೋದರೆ ಅದಕ್ಕೇನು ಸಂಬಂಧವಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?
ಯಾವುದೇ ಬಂಡಾಯ ನಮ್ಮಲ್ಲಿ ಇಲ್ಲ. ಒಂದು ವೇಳೆ ಬಂಡಾಯ ಇದ್ದಿದ್ದೇ ಆದರೆ ಮೊದಲು ನನಗೆ ಗೊತ್ತಾಗುತ್ತದೆ. ಕಾರಣ ಸತೀಶ್ ಜಾರಕಿಹೊಳಿ ನನಗೆ ತುಂಬಾ ಆತ್ಮೀಯರು. ಅಸಮಾಧಾನ ಏನಿದ್ದರೂ ನನ್ನ ಮುಂದೆ ಅವರು ಹೇಳುತ್ತಾರೆ ಎಂದರು.
ಶಾಸಕರಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಜಾರಕಿಹೋಳಿ ಹೇಳಿದ್ದಾರೆಂಬ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್, ಸತೀಶ ಜಾರಕಿಹೋಳಿ ಹಾಗೇ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ನಮ್ಮಲ್ಲಿ ಎಲ್ಲಾ ಗಟ್ಟಿಮುಟ್ಟಾಗಿದೆ ನಾವು ಒಗ್ಗಟ್ಟಾಗಿದ್ದೇವೆ. ಬಿಜೆಪಿಯಲ್ಲಿ ಏನಾಗುತ್ತದೆ ಎಂದು ಬರೆಯಿರಿ. ಸದಾನಂದಗೌಡ ಏನು ಹೇಳುತ್ತಿದ್ದಾರೆ? ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನ ನೇಮಕವಾಗಿಲ್ಲ ಎಂದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಮುಗಿದ ಅಧ್ಯಾಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಶಾಮನೂರು ಅವರು ಪರಸ್ಪರ ಚರ್ಚೆ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶ ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಾವೇಶ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಶಫರ್ಡ್ ಸಮ್ಮೇಳನ ನಡೆಯಿತು. ದೇಶದಲ್ಲಿರುವ ಎಲ್ಲಾ ಕುರಿಗಾಹಿಗಳು ಸಮ್ಮೇಳದಲ್ಲಿ ಭಾಗಿಯಾಗಿದ್ದರು. ಹಾಗಂತ ಅದು ಶಕ್ತಿಪ್ರದರ್ಶನವಾ ಎಂದು ಪ್ರಶ್ನಿಸಿದರು.
ಎಲ್ಲಾ ಸಮಾಜದ ಜನರು ಸಮ್ಮೇಳನ ಮಾಡುತ್ತಾರೆ. ಅದರಂತೆ ವೀರಶೈವ ಲಿಂಗಾಯತ ಮಹಾಸಭಾ ಸಮ್ಮೇಳನ ಮಾಡುತ್ತದೆ ಅದರಲ್ಲಿ ಏನಿದೆ? ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜಕೀಯೇತರ ಸಂಘಟನೆಯಾಗಿದೆ. ಮಹಾಸಭಾದಲ್ಲಿ ಶಿವಶಂಕರಪ್ಪ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ, ಪ್ರಭಾಕರ ಕೋರೆ, ಚರಂತಿಮಠ ಸೇರಿದಂತೆ ಎಲ್ಲ ಪಕ್ಷದ ನಾಯಕರಿದ್ದಾರೆ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮತ್ತೆ ಮೈತ್ರಿ ಆಗಿದ್ದು ಕಾಂಗ್ರೆಸ್ಗೆ ಬಹಳ ಲಾಭವಾಗಲಿದೆ. ಜಾತ್ಯಾತೀತ ಮತದಾರರಾದ ಹಿಂದುಳಿದವರು ಅಲ್ಪಸಂಖ್ಯಾತರು ದಲಿತರು ಹಾಗೂ ಇತರರು ಕಾಂಗ್ರೆಸ್ ಕಡೆ ವಾಲುತ್ತಾರೆ ಎಂದರು.
ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಯಾವಾಗಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಈ ಮೂಲಕ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Tue, 17 October 23