ಬೇಡಿಕೆ ಈಡೇರಿಸುವಂತೆ ಬೆಂಗಳೂರಲ್ಲಿ ಬಿಸಿಯೂಟ ಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ
ಸರ್ಕಾರ ಇನ್ನೂ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮಧ್ಯಾಹ್ನ ಬಿಸಿ ಊಟದ ಕಾರ್ಮಿಕರು ರಾಜ್ಯಾದ್ಯಂತ ಹಬ್ಬದ ನಂತರ ತಮ್ಮ ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅಕ್ಷರ ದಾಸೋಹ ನೌಕರರ ಸಂಗದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.
ಬೆಂಗಳೂರು ಅ.31: ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ 2022ರ ಡಿಸೆಂಬರ್ನಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರು (Midday meal workers) ಹಲವು ಬಾರಿ ಮನವಿ ಮಾಡಿಕೊಂಡು ಪ್ರತಿಭಟನೆ ನಡೆಸಿದರೂ ಸರ್ಕಾರ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ (Karnataka Government) ಗಮನ ಸೆಳೆಯಲು ಸೋಮವಾರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದರು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಆಶ್ರಯದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೊಪ್ಪಳ ಮತ್ತು ಕೋಲಾರ ಜಿಲ್ಲೆ ಮಧ್ಯಾಹ್ನ ಬಿಸಿಯೂಟ ಕಾರ್ಮಿಕರು ಭಾಗಿಯಾಗಿದ್ದರಿಂದ, ಈ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಪೂರೈಕೆಯಲ್ಲಿ ತೊಂದರೆಯಾಗಿತ್ತು.
ಸುಮಾರು 1,19,000 ಮಧ್ಯಾಹ್ನ ಬಿಸಿಯೂಟ ಕಾರ್ಮಿಕರು 55,80,000 ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾವಾರು ಮುಷ್ಕರವನ್ನು ಆಯೋಜಿಸಿದ್ದು, ಕೊಪ್ಪಳ ಮತ್ತು ಕೋಲಾರದಿಂದ 450 ಕ್ಕೂ ಹೆಚ್ಚು ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಜಿಲ್ಲೆಗಳ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಬಾಗಲಕೋಟೆಯ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದು, ಅಂದು ಜಿಲ್ಲೆಯ ಶಾಲೆಗಳಲ್ಲಿ ಊಟ ನೀಡುವುದಿಲ್ಲ ಎಂದು ಸಂಘಟನೆ ಮಂಗಳವಾರ ತಿಳಿಸಿದೆ.
ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ ದೀಪಾವಳಿವರೆಗೆ ಪ್ರತಿ ಜಿಲ್ಲೆಯಿಂದ ಕಾರ್ಮಿಕರು ಬಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೇ, ಮಧ್ಯಾಹ್ನ ಬಿಸಿ ಊಟದ ಕಾರ್ಮಿಕರು ರಾಜ್ಯಾದ್ಯಂತ ಹಬ್ಬದ ನಂತರ ಕೆಲಸವನ್ನು ನಿಲ್ಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಬಿಸಿಯೂಟ ಯೋಜನೆ: ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 212 ಕೋಟಿ ರೂ. ಹಣ ಬಿಡುಗಡೆ
ನಮ್ಮ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತದೆ. ಒಮ್ಮೆ ಬಂದು ಚರ್ಚೆ ಮಾಡಿ ಹೋದ ನಂತರ ಏನೂ ಕಾರ್ಯರೂಪಕ್ಕೆ ಬರುವುದಿಲ್ಲ. 60 ವರ್ಷ ತುಂಬಿದ ಹುದ್ದೆಯಿಂದ ವಜಾಗೊಂಡವರಿಗೆ 1 ಲಕ್ಷ ರೂಪಾಯಿ ಪಿಂಚಣಿ, ಕೆಲಸದ ಸ್ಥಳದಲ್ಲಿ ಮರಣ ಹೊಂದಿದಲ್ಲಿ 25 ಲಕ್ಷ ರೂಪಾಯಿ ಪರಿಹಾರ ಮತ್ತು ಹೊಸ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ವೇತನ ಹೆಚ್ಚಳವನ್ನು ಜನವರಿಯಿಂದ ಜಾರಿಗೊಳಿಸಬೇಕು ಎಂಬುವುದು ಕಾರ್ಮಿಕರ ಬೇಡಿಕೆಗಳಾಗಿವೆ.
ಯೋಜನೆ ಸ್ಥಾಪನೆಯಾಗುವವರೆಗೆ 45 ಮತ್ತು 46 ನೇ ಭಾರತೀಯ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಸರ್ಕಾರವು ಕಾರ್ಮಿಕರನ್ನು ಗುರುತಿಸಬೇಕು ಮತ್ತು ಶಾಲೆಗಳಲ್ಲಿ ಅಡುಗೆಯವರನ್ನು ‘ಡಿ’ ಕಾರ್ಮಿಕರಾಗಿ ನೇಮಿಸಬೇಕು ಎಂದು ಪ್ರತಿಭಟನಾಕಾರರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Tue, 31 October 23