
ಬೆಂಗಳೂರು, ಜೂನ್ 21: ಅಕ್ರಮ ಗಣಿಗಾರಿಕೆ ಕುರಿತು ಸಿಎಂ ಸಿದ್ದರಾಮಯ್ಯಗೆ (Siddaramaiah) ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) 7 ಪುಟಗಳ ಪತ್ರ ಬರೆದಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ರಾಜಕಾರಣಿಗಳು, ಅಧಿಕಾರಶಾಹಿಗಳ ಅಕ್ರಮದಿಂದ ಈ ಹಿಂದೆ ಸಂಪತ್ತು ಲೂಟಿಯಾಗಿ 1.50 ಲಕ್ಷ ಕೋಟಿ ರೂ ಸರ್ಕಾರಕ್ಕೆ ನಷ್ಟವಾಗಿತ್ತು. 2017-18ರಲ್ಲಿ ನನ್ನ ಅಧ್ಯಕ್ಷತೆಯ ಉಪಸಮಿತಿಯಲ್ಲಿ ಇದನ್ನು ಬಹಿರಂಗಗೊಳಿಸಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ 320 ಕಿ.ಮೀ. ಪಾದಯಾತ್ರೆ ಮಾಡಲಾಗಿತ್ತು. ಆ ನಂತರ ಕೆಲ ಪ್ರಕರಣಗಳನ್ನು ತನಿಖಾ ಸಂಸ್ಥೆಗಳಿಗೆ ವಹಿಸಲಾಗಿತ್ತು. ಒಂದೆರಡು ಪ್ರಕರಣಗಳಲ್ಲಿ ಪ್ರಮುಖ ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ, ಅನೇಕ ಪ್ರಕರಣಗಳು ಇನ್ನೂ ಎಸ್ಐಟಿ ವಿಚಾರಣೆ ಹಂತದಲ್ಲೇ ಇವೆ ಎಂದಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!
ಅಕ್ರಮ ಗಣಿಗಾರಿಕೆಯ ಶೇ.7ರಷ್ಟು ಪ್ರಕರಣ ಮಾತ್ರ ತನಿಖೆಗೆ ಒಳಪಟ್ಟಿದೆ. ಆದರೆ ಶೇ.92ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿಲ್ಲ. ಅಧಿಕಾರಶಾಹಿಯ ಮನೋಭಾವದಿಂದ ಕೆಲ ಕೇಸ್ ತನಿಖೆ ಆಗಲೇ ಇಲ್ಲ. ಎಸ್ಐಟಿಗೆ ವಹಿಸಿದ ಪ್ರಕರಣಗಳಲ್ಲಿ ಪ್ರಗತಿಯೂ ಸಾಧಿಸಲಿಲ್ಲ. ಹೀಗಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಸೂಲಿ ಆಯುಕ್ತರ ನೇಮಿಸಬೇಕು. ಪೊಲೀಸ್ ಇಲಾಖೆಯಡಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಸಚಿವ ಹೆಚ್ಕೆ ಪಾಟೀಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಕೆ.ಪಾಟೀಲ್, ರಾಜ್ಯದ ಸೇವೆ ಆಗಬೇಕು. ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬೇಕು ಅನ್ನೋ ಕಾರಣಕ್ಕೆ ಪತ್ರ ಬರೆದಿದ್ದೇನೆ. ಸಿಎಂಗೆ ಈಗಾಗಲೇ ಪತ್ರ ತೋರಿಸಿದ್ದೇನೆ ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.
12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದರೂ ಅದರಲ್ಲಿ ಕೇವಲ ಶೇಕಡ 7 ತನಿಖೆಯಾಗುತ್ತಿವೆ. 7ರಲ್ಲಿ 2% ಅಂದರೆ ಒಟ್ಟು ಪ್ರಕರಣದಲ್ಲಿ 0.2% ತೀರ್ಪು ಬಂದಿವೆ. ಅದಕ್ಕೆ ತಾರ್ಕಿಕ ಅಂತ್ಯ ಕೊಡಬೇಕಿದೆ. ಸರ್ಕಾರದ ಹಣ, ರಾಜ್ಯದ ಹಣ 1 ಲಕ್ಷ 40 ಸಾವಿರ ಕೋಟಿ ರೂ ಆಗಿದೆ. ಸಿಬಿಐ ಅವರಿಗೆ ನಾವು 9 ಪ್ರಕರಣ ವಹಿಸಿದ್ದೇವೆ. ಅದರಲ್ಲಿ 3 ಪ್ರಕರಣ ಬಿಟ್ಟು 6 ಪ್ರಕರಣ ನಾವು ಮಾಡಲ್ಲ ಅಂತ ಕಳುಹಿಸಿದ್ದಾರೆ. ಎಸ್ಐಟಿನಲ್ಲಿ ಬಹುಭಾಗ ಪ್ರಕರಣಗಳು ತನಿಖೆಯಾಗಿಲ್ಲ. ಆ ಉದ್ದೇಶದಿಂದ ಸಿಎಂಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಒಂದೂಕಾಲು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿರುವ ತೃಪ್ತಿ ನನಗಿದೆ: ವಿಜಯೇಂದ್ರ
ನಾವು 15 ವರ್ಷದ ಹಿಂದೆ ಪಾದಯಾತ್ರೆ ಮಾಡಿದ್ದೇವೆ. ಇಷ್ಟು ವರ್ಷ ಆದ ಮೇಲೂ ಮತ್ತೆ ನಾವೇ 2013 ರಿಂದ 2018 ರೊಳಗ ಸಿದ್ದರಾಮಯ್ಯ ಅವರೇ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದರು. ಕಮಿಟಿಯಲ್ಲಿ ಲೋಕಾಯುಕ್ತರು ಏನು ಮಾಡಿದ್ದರಲ್ಲಾ ಅದು ಅಲ್ಲದೆ, ಅದರ ಮುಂದಿನ ಅವಧಿಯೊಳಗಿನ ಹಾನಿ ಯಾವ ಪ್ರಮಾಣದ್ದು ಅಂತ ನಾವು ಎತ್ತಿ ಹಿಡಿದಿದ್ವಿ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:43 am, Sat, 21 June 25