
ಹುಬ್ಬಳ್ಳಿ, (ಅಕ್ಟೋಬರ್ 23): ಕರ್ನಾಟಕದಲ್ಲಿ ತೀವ್ರ ಬರಗಾಲ ಮತ್ತು ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿ ಹೋಗಿರುವ ಲಕ್ಷಾಂತರ ರೈತರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ, ತನ್ನ ಪಾಲಿನ ಬೆಳೆ ವಿಮೆ ಪ್ರೀಮಿಯಂ ಹಣವನ್ನು ಬಿಡುಗಡೆ ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ಬರೆದಿರುವ ಅವರು, ಹಣಕಾಸು ಇಲಾಖೆಯಲ್ಲಿ ನನೆಗುದಿಗೆ ಬಿದ್ದಿರುವ ಕಡತವನ್ನು ತಕ್ಷಣವೇ ವಿಲೇವಾರಿ ಮಾಡಿ, ರಾಜ್ಯ ಸರ್ಕಾರದ ಪಾಲಿನ ಪ್ರೀಮಿಯಂ ಮೊತ್ತವನ್ನು ಬಿಡುಗಡೆಗೊಳಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕರ್ನಾಟಕದ 2026ರ ಮುಂಗಾರು ಹಂಗಾಮಿಗಾಗಿ ಕೇಂದ್ರದ ಪಾಲಿನ ಪ್ರೀಮಿಯಂ ಸಹಾಯಧನವಾಗಿ ಜುಲೈ ಮತ್ತು ಆಗಸ್ಟ್ 2026ರಲ್ಲಿ ಒಟ್ಟು 1,342 ಕೋಟಿ ರೂ.ಪಾವತಿಸಲಾಗಿದೆ. ಕೊನೆಯ ಪಾವತಿಯನ್ನು 27 ಆಗಸ್ಟ್ 2026ರಂದು ಮಾಡಲಾಗಿದೆ. ಈ ಮೊತ್ತವು ಕೇಂದ್ರ ಸರ್ಕಾರ ಪಾವತಿಸಬೇಕಾದ ಒಟ್ಟು ಪಾಲಿನ ಸುಮಾರು ಶೇ.80ರಷ್ಟಾಗಿದೆ. ರೈತರ ನೋಂದಣಿ ದತ್ತಾಂಶ ಅಂತಿಮಗೊಂಡು, ವಿಮಾ ಕಂಪನಿಗಳಿಂದ ಬೇಡಿಕೆಗಳು ಸ್ವೀಕೃತವಾದ ನಂತರ ಉಳಿದ ಮೊತ್ತವನ್ನು ಪಾವತಿಸಲಾಗುವುದು ಎಂದು ಕೇಂದ್ರ ಇಲಾಖೆ ತಿಳಿಸಿದೆ.
ಈಗಾಗಲೇ ರಾಜ್ಯ ಸರ್ಕಾರದಲ್ಲಿ ವ್ಯಾಪಿಸಿರುವ ಆಡಳಿತಾತ್ಮಕ ಮಿಸ್‌ಮ್ಯಾನೇಜ್‌ಮೆಂಟ್‌ನಿಂದಾಗಿ ರೈತ ಸಮುದಾಯ ಕಂಗೆಟ್ಟಿದೆ. ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ಸಕಾಲಕ್ಕೆ ಹಣ ಬಿಡುಗಡೆ ಮಾಡಿದರೂ, ರಾಜ್ಯ ಸರ್ಕಾರವು ತನ್ನ ಪಾಲಿನ ಹಣವನ್ನು ಇಟ್ಟುಕೊಂಡು ಕುಳಿತಿರುವುದು ಖಂಡನೀಯ. ಬರಗಾಲದಿಂದ ಬೆಳೆ ಕಳೆದುಕೊಂಡು ಕಣ್ಣೀರು ಸುರಿಸುತ್ತಿರುವ ರೈತರ ಹಿತದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಇನ್ನು ಮುಂದಾದರೂ ವಿಳಂಬ ಮಾಡದೆ, ಕೂಡಲೇ ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಣಕಾಸು ಇಲಾಖೆಯಲ್ಲಿ ಬಾಕಿಯಿರುವ ಕಡತಕ್ಕೆ ತಕ್ಷಣ ಅನುಮೋದನೆ ನೀಡಿ, ರಾಜ್ಯ ಸರ್ಕಾರದ ಪಾಲಿನ 1,680 ಕೋಟಿ ರೂ. ಪ್ರೀಮಿಯಂ ಮೊತ್ತವನ್ನು ತಕ್ಷಣವೇ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಪ್ರಹ್ಲಾದ್ ಜೋಶಿ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.