Mansoon Rain: ರೈತರಿಗೆ ಗುಡ್ನ್ಯೂಸ್: ಕರ್ನಾಟಕದಲ್ಲಿ ಮೇ 31ರಿಂದ ಶುರುವಾಗಲಿದೆ ಮುಂಗಾರು ಮಳೆ!
Mansoon In Karnataka: ಬರಗಾಲದಿಂದ ತತ್ತರಿಸಿದ್ದ ಕರ್ನಾಟಕದಲ್ಲಿ ಈಗ ಹಲವೆಡೆ ಮಳೆಯಾಗುತ್ತಿದ್ದು, ಪೂರ್ಣ ಮುಂಗಾರು ಚುರುಕುಗೊಂಡಿದೆ. ಇದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಇನ್ನು ಈ ಬಾರಿ ಮುಂಗಾರು ಇದೇ ಮೇ 31ರಂದು ನೈರುತ್ಯ ಮುಂಗಾರು ಮಳೆ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, (ಮೇ 26): ಕರ್ನಾಟಕದಲ್ಲಿದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಮೇ 31ಕ್ಕೆ ರಾಜ್ಯಕ್ಕೆ ಮುಂಗಾರು (Mansoon Rain) ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಮಳೆ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವುದರಿಂದ ಸಹಜವಾಗಿಯೇ ರೈತರಲ್ಲಿ ಸಂತಸ ಮನೆ ಮಾಡಿದೆ.
ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
2023 ರಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ 831.8 ಮಿಮೀ ಮಳೆಯಾಗಬೇಕಿತ್ತು. ಆದ್ರೆ, 678.4 ಮಿಮೀ ಮಳೆಯಾಗಿದೆ. ಇದರೊಂದಿಗೆ 18%ರಷ್ಟು ಮಳೆ ಕೊರತೆಯಾಗಿತ್ತು ಎಂದು IMD ತಿಳಿಸಿದೆ. ಇನ್ನು ಈಗಾಗಲೇ ಈವರ್ಷ ಮಾರ್ಚ್ 1 ರಿಂದ ಮೇ 24 ರವರೆಗೆ ರಾಜ್ಯದಲ್ಲಿ 120.7 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ (94 ಮಿ.ಮೀ) ಹೆಚ್ಚಾಗಿದೆ. ಪೂರ್ವ ಮುಂಗಾರು ಚುರುಕುಗೊಂಡಿದ್ದರಿಂದ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ.
ಮೇ 31ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಅಲ್ಲದೇ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ