
ಬೆಂಗಳೂರು, (ಜುಲೈ 18): ಸಂಸತ್ತಿನ ಮುಂಗಾರು ಅಧಿವೇಶನ ಇದೇ ಜುಲೈ 21ರಿಂದ ಆರಂಭವಾಗಲಿದ್ದು, ಇತ್ತ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ (Karnataka legislature Monsoon session) ಆಗಸ್ಟ್ 11ರಿಂದ ಆರಂಭವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್ 11ರಿಂದ ಆ. 22ರ ವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಇನ್ನು ಆಗಸ್ಟ್ 11ರಂದು ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದು, ಒಟ್ಟು 12 ದಿನಗಳ ಪೈಕಿ 8 ದಿನ ಮಾತ್ರ ಅಧಿವೇಶನ ನಡೆಯಲಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಭಾರತ ಸಂವಿಧಾನದ 174ನೇ ಅನುಚ್ಛೇದದ (1)ನೇ ಖಂಡದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯಪಾಲರು ಆದ ನಾನು 2025ರ ಆಗಸ್ಟ್ 11ರಂದು ಸೋಮವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಸಮಾವೇಶಗೊಳಿಸಬೇಕೆಂದು ಈ ಮೂಲಕ ಕರೆಯುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಕರ್ನಾಟಕ ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 11 ಸೋಮವಾರದಿಂದ 22-08-2025ರವರೆಗೆ ವಿಧಾನಮಂಡಲದ ಕಲಾಪಗಳು ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.