ಹತ್ತು ತಿಂಗಳ ಕೂಸನ್ನು ಡಾಬಾದಲ್ಲಿ ಬಿಟ್ಟು ಹೋದ ತಾಯಿ, ಆದರೂ ಮರಳಿ ಅಮ್ಮನ ಮಡಿಲು ಸೇರಿದ ಕಂದ.. ಆಗಿದ್ದೇನು?
ತಾಯಿಯೊಬ್ಬಳು, ತಾನು ಸತ್ತರೂ ಪರವಾಗಿಲ್ಲ. 10 ತಿಂಗಳ ಮಗು ಸಾಯಬಾರದೆಂದು ಡಾಬಾ ಒಂದರಲ್ಲಿ ಮಗುವನ್ನು ಬಿಟ್ಟು ಸಾಯುವ ನಿರ್ಧಾರ ಮಾಡಿರುತ್ತಾಳೆ. ತಾಯಿ ಬಿಟ್ಟರೂ ಮಗು ತಾಯಿಯನ್ನು ಬಿಡದೇ ಮರಳಿ ಮತ್ತೆ ಮಡಲಿಗೆ ಮಗು ಸೇರಿದೆ. ಇಂತಹದ್ದೊಂದು ಮನ ಕೆರಳಿಸುವ ಕಥೆ ಇಲ್ಲಿದೆ..

ಹಾವೇರಿ : ಮಕ್ಕಳು ಅಂದ್ರೆ ಹೆತ್ತ ತಾಯಿಗೆ ಪಂಚಪ್ರಾಣ. ಅದರಲ್ಲೂ ಹತ್ತು ತಿಂಗಳ ಹಸುಗೂಸು ಅಂದರಂತೂ ಎಲ್ಲಿಲ್ಲದ ಪ್ರೀತಿ. ಆದರೆ ಹೆತ್ತ ತಾಯಿಯೊಬ್ಬಳು (ರೇಖಾ) ಏನೂ ಅರಿಯದ ಹತ್ತು ತಿಂಗಳ ಹಸುಗೂಸನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದ ಘಟನೆ ಎರಡು ದಿನಗಳ ಹಿಂದೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ನಲ್ಲಿ ನಡೆದಿದೆ. ಸ್ಥಳೀಯರು ಮಗುವನ್ನು ಹತ್ತಿರದ ಪೊಲೀಸ್ ಠಾಣೆಗೆ ತಲುಪಿಸಿದ್ದು, ಹೆತ್ತವಳನ್ನು ಹುಡುಕಿ ಮಗುವನ್ನು ಮಡಿಲು ಸೇರಿಸಿದ್ದಾರೆ.
ಪತಿಯಿಂದ ಪತ್ನಿಗೆ(ರೇಖಾ) ಕಿರುಕುಳ:
ರೇಖಾಳ ಗಂಡ ಕುಡಿತದ ಮತ್ತಿನಲ್ಲಿ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ರೇಖಾ ತಾನು ಸಾಯಬೇಕು ಎಂದು ವಿಚಾರ ಮಾಡಿ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಬಂದಿದ್ದಳು. ಆದರೆ ತಾನು ಸತ್ತರೂ ಪರವಾಗಿಲ್ಲ, ಮುಗ್ಧ ಮಗು ಬದುಕ ಬೇಕು. ಮಗುವಿಗೆ ಉತ್ತಮ ಭವಿಷ್ಯ ಸಿಗಬೇಕು ಎಂದು ಮಗುವನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದಾಳೆ.
ದತ್ತು ಕೇಂದ್ರ ಸೇರಿದ್ದ ಮಗು :
ಹೆತ್ತವರು ಅಥವಾ ಪೋಷಕರು ಹತ್ತು ತಿಂಗಳ ಗಂಡು ಮಗುವನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಾನಗಲ್ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್ಐ ಶ್ರೀಶೈಲ್ ಪಟ್ಟಣ ಶೆಟ್ಟಿ ಹಾಗೂ ಸಿಡಿಪಿಓ ಸಂತೋಷ ಹಾಗೂ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ತಂಡ ಹೆತ್ತವರ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ.
ಸುಮಾರು ಗಂಟೆಗಳಿಂದ ಮಗು ಡಾಬಾದಲ್ಲಿಯೇ ಇದ್ದರೂ ಮಗುವಿನ ಹೆತ್ತವರು ಅಥವಾ ಪೋಷಕರು ಮಗುವನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಹೀಗಾಗಿ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಇಡಲಾಗಿತ್ತು.
ಮಗುವನ್ನು ಹುಡುಕಿಕೊಂಡು ಬಂದ ತಾಯಿ :
ಪತಿಯ ಕಿರುಕುಳಕ್ಕೆ ಬೇಸತ್ತು ಸಾಯುವ ನಿರ್ಧಾರದಿಂದ ಮನೆ ಬಿಟ್ಟು ಬಂದಿದ್ದ ತಾಯಿ ಹೆತ್ತ ಮಗುವನ್ನು ಡಾಬಾದಲ್ಲಿ ಬಿಟ್ಟು ಹೊರಟು ಹೋಗಿದ್ದಾಳೆ. ನಂತರ ಡಾಬಾಗೆ ಸ್ವಲ್ಪ ದೂರದ ಅಂಗಡಿಯ ಬಳಿ ನಿಂತುಕೊಂಡು ಮಗು ಎಲ್ಲಿ ಹೋಗುತ್ತದೆ ಎಂಬುದನ್ನು ಗಮನಿಸಿದ್ದಾಳೆ. ನಂತರ ರಾತ್ರಿಯಿಡಿ ಹೆತ್ತ ಮಗುವನ್ನು ನೆನೆದು ಪಡಬಾರದ ಯಾತನೆ ಅನುಭಿಸಿದ್ದಾಳೆ.
ಬೆಳಗಾಗುತ್ತಲೇ ತಾಯಿ ರೇಖಾ ಮಗುವನ್ನು ಹುಡುಕಿಕೊಂಡು ಹಾನಗಲ್ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಪೊಲೀಸರು ಮಗುವನ್ನು ಬಿಟ್ಟು ಹೋಗಿದ್ದು ಯಾಕೆ ಎಂಬುದರ ಬಗ್ಗೆ ವಿಚಾರಣೆ ಮಾಡಿದಾಗ ವಿಷಯ ತಿಳಿದು ಬಂದಿದೆ.
ಮರಳಿ ಹೆತ್ತಮ್ಮಳ ಮಡಿಲು ಸೇರಿದ ಮಗು :
ಈ ವಿಷಯವನ್ನು, ಹಾನಗಲ್ ಠಾಣೆಯ ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಸಂತೋಷ ಹಾಗೂ ಸಿಬ್ಬಂದಿ ತಂಡ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಗಮನಕ್ಕೆ ತಂದು ಇಲಾಖೆಯ ನಿಯಮಗಳಂತೆ ತಾಯಿಯನ್ನು ವಿಚಾರಣೆ ಮಾಡಿ ಮಗುವನ್ನು ಹೆತ್ತವಳಿಗೆ ಹಸ್ತಾಂತರ ಮಾಡಿದ್ದಾರೆ.
ಮಗುವನ್ನು ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಮಗುವನ್ನು ದತ್ತು ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಪೊಲೀಸರು ಹೆತ್ತವರನ್ನು ಹುಡುಕಾಡುತ್ತಿದ್ದಾಗಲೆ ತಾಯಿ ಮಗುವನ್ನು ಹುಡುಕಿಕೊಂಡು ಬಂದಿದ್ದಳು.
ನಂತರ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಇಲಾಖೆಯ ನಿಯಮಗಳ ಪ್ರಕಾರ ಮಗುವನ್ನು ಹೆತ್ತವಳಿಗೆ ಮರಳಿಸಲಾಗಿದೆ. ಜೊತೆಗೆ ಮಗುವನ್ನು ಮರಳಿ ಕರೆದುಕೊಂಡು ಹೋದ ಮೇಲೆ ಮಗುವನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇಡಲಾಗಿದೆ ಎಂದು ಸಂತೋಷ ಹಾನಗಲ್ ಸಿಡಿಪಿಓ ತಿಳಿಸಿದ್ದಾರೆ.
ಯಾದಗಿರಿ: ನದಿಯಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ 15 ದಿನದ ಹಸುಗೂಸು ರಕ್ಷಣೆ
Published On - 12:15 pm, Fri, 15 January 21