ರಾಜಕೀಯ ಜೀವನದಲ್ಲೇ ಮೊದಲ FIR: ಸಿದ್ದರಾಮಯ್ಯ ಮುಂದಿರುವ ಕಾನೂನು ಆಯ್ಕೆಗಳೇನು?
ಸಿಎಂ ಸಿದ್ದರಾಮಯ್ಯ ವಿರುದ್ಧ FIR ಏನೋ ದಾಖಲಾಗಿದೆ. ಇನ್ಮುಂದೆ ಸಿಎಂ ಲೋಕಾಯುಕ್ತರ ತನಿಖೆ ಎದುರಿಸಬೇಕಿದೆ. ಮುಡಾದಲ್ಲಿ 14 ಸೈಟ್ ತೆಗೆದುಕೊಂಡ ಬಗ್ಗೆ ಅಧಿಕಾರಿಗಳು ಇಂಚಿಂಚೂ ತಲಾಶ್ ನಡೆಸಲಿದ್ದಾರೆ. ಸೈಟು ಹಂಚಿಕೆಯಲ್ಲಿ ಸಿಎಂ ಪಾತ್ರ ಇದಿಯಾ? ಇಲ್ಲ ಅಂದಿದ್ರೆ ಪ್ರಕರಣದ ಹಿಂದಿರುವ ಕೈವಾಡ ಯಾರದ್ದು ಎಂಬೆಲ್ಲಾ ಸತ್ಯಾಂಶ ಬಯಲಿಗೆಡವಲಿದ್ದಾರೆ. ಹಾಗಿದ್ರೆ.. ಸಿಎಂ ಬಂಧನ ಆಗುತ್ತಾ?. ಸಿಎಂ ರಾಜೀನಾಮೆ ಕೊಡ್ಲೇಬೇಕಾ? ಸಿಎಂ ಮುಂದಿನ ಹಾದಿ ಏನು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರು/ಮೈಸೂರು, (ಸೆಪ್ಟೆಂಬರ್ 27): ಸಿಎಂ ಸಿದ್ದರಾಮಯ್ಯಗೆ ಮಹಾಸಂಕಷ್ಟ ಎದುರಾಗಿದೆ. ಮುಡಾ 14 ಸೈಟು ಹಂಚಿಕೆ ವಿವಾದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲೇ, ಹಿಂದೆಂದೂ ಎದುರಿಸದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ತನಿಖೆ ಎದುರಿಸುತ್ತಿದ್ದಾರೆ. ಹೌದು.. ಸಿಎಂ ಸಿದ್ದರಾಮಯ್ಯ ನಿಷ್ಕಂಳಕ ರಾಜಕಾರಣಿ ಎಂದೇ ಖ್ಯಾತಿ. ಹೀಗಿದ್ದ ಹೆಸರಿಗೆ ಸದ್ಯ ಮುಡಾ ಪ್ರಕರಣದ ಕೆಸರು ಮೆತ್ತಿಕೊಂಡಿದೆ. ಮುಖ್ಯಮಂತ್ರಿ ಆಗಿರುವಾಗಲೇ ಲೋಕಾಯುಕ್ತರ ತನಿಖೆಗೆ ಕೊರಳೊಡ್ಡಬೇಕಾದ ಅನಿವಾರ್ಯತೆ ಎದುರಾಗಿದೆ.
ಹೇಗಿರಲಿದೆ ಗೊತ್ತಾ ಲೋಕಾಯುಕ್ತ ತನಿಖೆ?
ಸಿಎಂ ಸಿದ್ದರಾಮಯ್ಯರ ಜೀವನದಲ್ಲಿ ದಾಖಲಾದ ಮೊದಲ FIR ಇದು.. ಮುಡಾ ಪ್ರಕರಣದಲ್ಲಿ ಸಿಎಂ ಮೊದಲ ಆರೋಪಿಯಾಗಿದ್ರೆ, ಸಿದ್ದರಾಮಯ್ಯರ ಪತ್ನಿ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇನ್ನು ಇಡೀ ಪ್ರಕರಣ ಮುಂದೆ ಹೇಗೆ ಸಾಗುತ್ತೆ.. ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು ಎನ್ನುವುದನ್ನು ನೋಡುವುದಾದರೆ, ತನಿಖೆಯ ಮೊದಲ ಪ್ರಕ್ರಿಯೆ ಅಂದ್ರೆ, ಸಿದ್ದರಾಮಯ್ಯ & ಕುಟುಂಬದ ವಿರುದ್ಧ ತನಿಖೆ ಆರಂಭವಾಗಲಿದೆ.. ಬಳಿಕ ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಅವರ ಹೇಳಿಕೆ, ಜತೆಗೆ ದಾಖಲೆ ಪಡೆದುಕೊಳ್ತಾರೆ. ಇಷ್ಟೆ ಅಲ್ಲದೇ 1996ರಿಂದ 2023 ರವರೆಗಿನ ದಾಖಲೆ ಪರಿಶೀಲಿಸ್ತಾರೆ. ಮುಂದುವರೆದು ಜಾಗದ ಮೂಲ ಮಾಲೀಕರು ಮತ್ತು ಅಧಿಕಾರಿಗಳು ಯಾರಿದ್ದಾರೋ ಅವರಿಗೆ ನೋಟಿಸ್ ಕೊಡಲಿದ್ದಾರೆ. ಸಿದ್ದರಾಮಯ್ಯ, ಅವರ ಪತ್ನಿ ಸೇರಿದಂತೆ ಇತರೆ ಆರೋಪಿಗಳು ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯಲಾಗುತ್ತೆ.
ಇದನ್ನೂ ಓದಿ: ಸಿಎಂ ವಿರುದ್ಧದ ಎಫ್ಐಆರ್ನಲ್ಲಿ ಯಾವೆಲ್ಲಾ ಸೆಕ್ಷನ್ ದಾಖಲು? ಯಾವ ಸೆಕ್ಷನ್ಗೆ ಏನು ಶಿಕ್ಷೆ?
ಅರೆಸ್ಟ್ ಆಗ್ತಾರಾ? ಸಿಎಂ ಮುಂದಿನ ನಡೆ ಏನು?
ಮುಡಾ ಉರುಳು ಸುತ್ತಿಕೊಂಡಿರೋ ಸಿಎಂ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಕೈ ಪಾಳಯ ಸೇರಿದಂತೆ ಸಿದ್ದು ಬೆಂಬಲಿಗರನ್ನ ಇದೇ ವಿಚಾರ ಆತಂಕಕ್ಕೆ ದೂಡಿದೆ. ಹಾಗಿದ್ರೆ ಸಿಎಂ ಅರೆಸ್ಟ್ ಆಗ್ತಾರಾ? ಅಥವಾ ಬಂಧನದಿಂದ ಪಾರಾಗೋದಕ್ಕೆ ಸಿದ್ದರಾಮಯ್ಯ ಮುಂದಿರುವ ಹಾದಿ ಏನು ಎನ್ನುವುದನ್ನು ನೋಡುವುದಾದರೆ, ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಬಂದ ಬಳಿಕ, ಬಂಧಿಸುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಬಂಧನದ ಭೀತಿ ಇದ್ದರೆ ಸಿಎಂ ಸೇರಿ ಎಲ್ಲ ಆರೋಪಿಗಳು ಅರ್ಜಿ ಸಲ್ಲಿಕೆ ಮಾಡುತ್ತಾರೆ, ಮೊದಲು ನಿರೀಕ್ಷಣಾ ಜಾಮೀನು ಕೋರಿ, ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. FIR ರದ್ದು ಮಾಡುವಂತೆ ಹೈಕೋರ್ಟ್ಗೂ ಮನವಿ ಮಾಡುವುದಕ್ಕೂ ಅವಕಾಶಗಳಿದ್ದು, ಒಂದು ವೇಳೆ ಎಫ್ಐಆರ್ಗೆ ತಡೆಯಾಜ್ಞೆ ಸಿಕ್ಕರೆ ಸಿಎಂ ಸಿದ್ದರಾಮಯ್ಯ ನಿಟ್ಟುಸಿರು ಬಿಡಲಿದ್ದಾರೆ.
FIR ಗೆ ತಡೆಯಾಜ್ಞೆ ಕೇಳೋದು ಮಾತ್ರವಲ್ಲದೇ, ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಮೇಲ್ಮನವಿ ಸಲ್ಲಿಸಬಹುದು. ರಾಜ್ಯಪಾಲರ ಅನುಮತಿಗೆ ತಡೆ ಸಿಕ್ಕರೂ ರಿಲೀಫ್ ಆಗಲಿದ್ದಾರೆ. ಈ ಬಗ್ಗೆ ಅಲರ್ಟ್ ಆಗಿರೋ ಸಿಎಂ ಲೀಗಲ್ ಟೀಮ್, ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಜೊತೆ ಚರ್ಚಿಸಿ ಮುಂದಿನ ಹೋರಾಟ ನಿರ್ಧಾರ ಮಾಡಿದ್ದಾರೆ.
ಒಟ್ಟಿನಲ್ಲಿ ಮುಡಾ ಪ್ರಕರಣದ ಒಟ್ಟಾರೆ ಬೆಳವಣಿಗೆ ಈಗ ಒಂದು ಹಂತಕ್ಕೆ ಬಂದು ತಲುಪಿದೆ. ರಾಜಕೀಯ ಜೀವನದಲ್ಲೇ ಮೊದಲ FIR ಹಾಕಿಸಿಕೊಂಡ ಸಿದ್ದರಾಮಯ್ಯನವರ ಹೋರಾಟದ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ