ಮುಡಾ ಹಗರಣದಲ್ಲಿ ಸಿಎಂಗೆ ಮತ್ತೆ ಶಾಕ್‌, ಲೋಕಾಯುಕ್ತ ತನಿಖೆಗೆ ಡೆಡ್​ಲೈನ್ ನೀಡಿದ ಕೋರ್ಟ್!

ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನೆಡೆಯಾಗಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​​ ಅನ್ನು ಹೈಕೋರ್ಟ್​ ಎತ್ತಿ ಹಿಡಿದ ಬೆನ್ನಲ್ಲೇ ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ವಿವರ ಇಲ್ಲಿದೆ ಓದಿ.

ಮುಡಾ ಹಗರಣದಲ್ಲಿ ಸಿಎಂಗೆ ಮತ್ತೆ ಶಾಕ್‌, ಲೋಕಾಯುಕ್ತ ತನಿಖೆಗೆ ಡೆಡ್​ಲೈನ್ ನೀಡಿದ ಕೋರ್ಟ್!
ಸಿಎಂ ಸಿದ್ದರಾಮಯ್ಯ
Follow us
| Updated By: ವಿವೇಕ ಬಿರಾದಾರ

Updated on:Sep 25, 2024 | 2:59 PM

ಬೆಂಗಳೂರು, ಸೆಪ್ಟೆಂಬರ್​ 25: ಮೈಸೂರು ನಗರಾಭಿವೃದ್ಧಿ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​ ಅನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು. ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಹಗರಣ ಸಂಬಂಧ ಆರು ವಾರಗಳ ಒಳಗಾಗಿ ಸಿಆರ್​ಪಿಸಿ ಸೆ.156(3) ಅಡಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಟಿಜೆ ಅಬ್ರಾಹಂ ಸಲ್ಲಿಸಿದ್ದ ಖಾಸಗಿ ದೂರುಗಳ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತು.

ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ ತನ್ನ ವಿಚಾರಣೆ ಮುಕ್ತಾಯವಾಗುವವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಹೈಕೋರ್ಟ್​ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ, ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಆರ್​ಪಿಸಿ ಕಾಯ್ದೆ ಉಲ್ಲೇಖಿಸಿ ತೀರ್ಪು ನೀಡಿದೆ.

ಸಿಎಂ ವಿರುದ್ಧ ಎಫ್​ಐಆರ್​ ದಾಖಲು ಸಾಧ್ಯತೆ

ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ನಂತರ ಮೈಸೂರು ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ಐಆರ್​ ದಾಖಲಾಗುವ ಸಾಧ್ಯತೆ ಇದೆ. 156(3) ಅಡಿ ತನಿಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಬೇಕೆಂಬ ನಿಯಮವಿದೆ. ಒಂದು ವೇಳೆ ಎಫ್​ಐಆರ್​ ದಾಖಲಾದರೆ ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆಯಾಗಲಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಪಿತೃಪಕ್ಷದ ಕಂಟಕ? ತುಂಗಭದ್ರೆಗೆ ಬಾಗಿನ ಅರ್ಪಿಸಿ ಮುಡಾ ಬಲೆಯಲ್ಲಿ ಸಿಕ್ಕಿಬಿದ್ರಾ?

ಸಿಎಂ ಬಂಧನ ಸಾಧ್ಯತೆ

ಪ್ರಕರಣದ ಸಂಪೂರ್ಣ ಅಧಿಕಾರ ಮೈಸೂರು ಲೋಕಾಯುಕ್ತದ ತನಿಖಾಧಿಕಾರಿಯ ಕೈಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವುದೇ ನಿಮಿಷದಲ್ಲಿ ಬಂಧಿಸುವ ಅಧಿಕಾರ ತನಿಖಾಧಿಕಾರಿಗೆ ಇದೆ. ಅವಶ್ಯಕತೆಗೆ ಅನುಸಾರವಾಗಿ ತನಿಖಾಧಿಕಾರಿ ಅಧಿಕಾರ ಬಳಸಬಹುದಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಹೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎಂಬುವುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:49 pm, Wed, 25 September 24