ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ: ಕೇಂದ್ರದ ಚೆಕ್ ಲಿಸ್ಟ್​ ಸಿಎಂ ಪರ ವಕೀಲರಿಗೆ ಅಸ್ತ್ರ

| Updated By: ರಮೇಶ್ ಬಿ. ಜವಳಗೇರಾ

Updated on: Aug 18, 2024 | 4:05 PM

ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ತನಿಖೆಗೆ ಅನಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ವಿರುದ್ಧ ಸಿಎಂ ಸಿದ್ದರಾಮಯ್ಯನವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹಿರಿಯ ವಕೀಲರು ನಾಳೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು ಸಿಎಂ ಪರ ವಕೀಲರಿಗೆ ವಾದ ಮಂಡಿಸಲು ಕೇಂದ್ರ ಸರ್ಕಾರ ಚೆಕ್​ ಲಿಸ್ಟ್​ ಅಸ್ತ್ರ ಸಿಕ್ಕಿದೆ. ಏನಿದು ಕೇಂದ್ರದ ಚೆಕ್​ ಲಿಸ್ಟ್​? ಇಲ್ಲಿದೆ ವಿವರ

ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ: ಕೇಂದ್ರದ ಚೆಕ್ ಲಿಸ್ಟ್​ ಸಿಎಂ ಪರ ವಕೀಲರಿಗೆ ಅಸ್ತ್ರ
ಸಿದ್ದರಾಮಯ್ಯ
Follow us on

ಬೆಂಗಳೂರು, (ಆಗಸ್ಟ್​ 18): ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾಗಿದೆ. ಹೀಗಾಗಿ ಕಾನೂನು ಸಮರದ ಕುರಿತು ಸಿಎಂ ಸಿದ್ದರಾಮಯ್ಯ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದು, ನಾಳೆಯೇ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಿದ್ದಾರೆ. ಇದಕ್ಕಾಗಿಯೇ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನು ಪ್ರಮುಖವಾಗಿ ಸಿಎಂ ಪರ ವಕೀಲರ ವಾದಕ್ಕೆ ಕೇಂದ್ರ ಸರ್ಕಾರದ ಚೆಕ್​ ಲಿಸ್ಟ್​ ಅಸ್ತ್ರ ಸಿಕ್ಕಿದ್ದು, ಪ್ರಾಸಿಕ್ಯೂಷನ್​ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ನಾಳೆಯಿಂದ ಕಾನೂನು ಸಮರ

14 ಸೈಟ್‌ ವಿಚಾರವೇ ಇದೀಗ ಸಿಎಂಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಆದರೂ ಜಗ್ಗದ ಕೈ ಪಡೆ ಕಾನೂನು ಸಮರ ಸಾರಿದೆ. ನಾಳೆಯಿಂದ ಅಸಲಿ ಕಾನೂನು ಯುದ್ಧ ಶುರುವಾಗಲಿದೆ. ಇನ್ನು ಕಾನೂನು ಸಮರಕ್ಕೆ ತೊಡೆ ತಟ್ಟಿ ನಿಂತಿರೋ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬಲ ಸಿಕ್ಕಿದೆ. ಹೈಕಮಾಂಡ್ ಕೂಡಾ ನೀವು ಕಾನೂನು ಹೋರಾಟ ನಡೆಸಿ, ಹೈಕಮಾಂಡ್ ನಿಮ್ಮ ಜೊತೆಗಿರುತ್ತೆ ಅಂತಾ ಸೂಚನೆ ಕೊಟ್ಟಿದೆ.

ಇದನ್ನೂ ಓದಿ: ರಾಜ್ಯಪಾಲರ ಆದೇಶದ ವಿರುದ್ಧ ನಾಳೆಯಿಂದ ಸಿದ್ದರಾಮಯ್ಯ ಕಾನೂನು ಯುದ್ಧ, ಮಂತ್ರಾಲಯ ಪ್ರವಾಸ ರದ್ದು

ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲೂ ಸಚಿವರೂ ಒಮ್ಮತದ ಬೆಂಬಲ ನೀಡಿದ್ದಾರೆ. ಕ್ಯಾಬಿನೆಟ್ ಬಳಿಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ್ದ ಸಿಎಂ-ಡಿಸಿಎಂ ಪ್ರಕರಣದ ಮಾಹಿತಿ ನೀಡಿದ್ದಾರೆ. ಹೀಗೆ ಎಲ್ಲಾ ಕಡೆಯಿಂದಲೂ ಬೆಂಬಲ ಪಡೆದಿರೋ ಸಿಎಂ, ಬುಧವಾರ ಶಾಸಕಾಂಗ ಸಭೆ ಕರೆದಿದ್ದಾರೆ. ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಲು ಮುಂದಾಗಿದ್ದಾರೆ. ಇದಕ್ಕಾಗಿ ದೆಹಲಿಯಿಂದ ಬರುತ್ತಿರುವ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಕೇಂದ್ರದ ಚೆಕ್​ ಲಿಸ್ಟ್​ನಲ್ಲೇನಿದೆ?

ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲು ಕೇಂದ್ರ ಸರ್ಕಾರವೇ 2021ರ ಸೆಪ್ಟೆಂಬರ್​​​​ನಲ್ಲಿ ಚೆಕ್​ಲಿಸ್ಟ್ ಮಾಡಿದೆ. ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳೇ ಪ್ರಾಸಿಕ್ಯೂಷನ್​ಗೆ ಕೇಳಬೇಕು. ಅಲ್ಲದೇ ಪ್ರಾಸಿಕ್ಯೂಷನ್​ಗೆ ನೀಡುವಾಗ ಯಾವುದಾದರೂ ತನಿಖಾ ವರದಿ ಇರಬೇಕು ಎಂಬುವುದನ್ನು ಕೇಂದ್ರ ಸರ್ಕಾರ ಚೆಕ್​ಲಿಸ್ಟ್ ಮಾಡಿದೆ. ಆದ್ರೆ, ಇದೀಗ ಸಿದ್ದರಾಮಯ್ಯನವರ ವಿರುದ್ಧ ಯಾವುದೇ ತನಿಖಾ ವರದಿ ಇಲ್ಲದೇ, ಆಧಾರವಿಲ್ಲದೇ ಪ್ರಾಸಿಕ್ಯೂಷನ್​ಗೆ ನೀಡಲಾಗಿದೆ. ಖಾಸಗಿ ವ್ಯಕ್ತಿಗಳ ದೂರಿಗೆ ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ಭಾವನೆಗೆ ಈಡಾಗಿದ್ದಾರೆ. 2021ರ ಸೆಪ್ಟೆಂಬರ್​​​​ನಲ್ಲಿ ಕೇಂದ್ರ ನೀಡಿರುವ ಚೆಕ್​ಲಿಸ್ಟ್​​ ಪಾಲನೆಯಾಗಿಲ್ಲ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್​​​​ ಕಾನೂನು ಬಾಹಿರ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17A ಎಸ್​ಒಪಿ ಉಲ್ಲಂಘನೆಯಾಗಿದೆ.

ಅಲ್ಲದೇ ಸುಪ್ರೀಂಕೋರ್ಟ್​ನ ಬೇರೆ ಬೇರೆ ಪ್ರಕರಣಗಳ ಉಲ್ಲೇಖಿಸಲಿದ್ದು, 7 ಪ್ರಕರಣಗಳಲ್ಲಿ ಕೋರ್ಟ್​ ಅಭಿಪ್ರಾಯಗಳ ಪ್ರಸ್ತಾಪಿಸಿ ಪ್ರಾಸಿಕ್ಯೂಷನ್​ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ಪ್ಲ್ಯಾನ್ ಮಾಡಿದ್ದಾರೆ.

ಒಟ್ಟಿನಲ್ಲಿ ಸಿಎಂ ಹಾಗೂ ರಾಜ್ಯಪಾಲ ನಡುವಿನ ಅಸಲಿ ಯುದ್ಧ ನಾಳೆಯಿಂದ ಶುರುವಾಗಲಿದ್ದು, ಇದರಲ್ಲಿ ಯಾರ ಕೈ ಮೇಲುಗೈ ಸಾಧಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ