ಸಿಎಂ ಸಿದ್ದರಾಮಯ್ಯಗೆ ಇಂದು ನಿರ್ಣಾಯಕ ದಿನ: ಹೈಕೋರ್ಟ್‌ನಲ್ಲಿ ಮುಡಾ ಕೇಸ್ ವಿಚಾರಣೆ, ಅಂತಿಮ ವಾದ
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಹಗರಣ ಆರೋಪದ ಕಾನೂನು ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನ ಪ್ರಶ್ನಿಸಿದ ಅರ್ಜಿಯ ಅಂತಿಮ ಹಂತದ ವಾದ ಪ್ರತಿವಾದ ಇವತ್ತು ಹೈಕೋರ್ಟ್‌ನಲ್ಲಿ ನಡೆಯಲಿದೆ. ಇವತ್ತು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 12: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸೋಮವಾರದ ವಾದದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಚಿವ ಸಂಪುಟದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದರು. ಇಂದು ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ಕುತೂಹಲ ಕೆರಳಿಸಿದೆ.
ಸೋಮವಾರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. 17ಎ ಅಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು, ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು, ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ವಿಚಾರಣೆ, ತನಿಖೆಗೂ ಮುನ್ನ 17ಎ ಅನುಮತಿ ಬೇಕಲ್ಲವೇ ಎಂದು ಪ್ರಶ್ನಿಸಿದ್ದರು.
ಅಡ್ವೊಕೇಟ್ ಜನರಲ್ ವಾದವೇನಿತ್ತು?
17ಎ ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ, ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ. ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ. ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು. ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು ಎಂದು ಅವರು ವಾದಿಸಿದ್ದರು.
ಶಶಿಕಿರಣ್ ಶೆಟ್ಟಿ ವಾದ ಮುಗಿಯುತ್ತಿದ್ದಂತೆ ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್, ಪ್ರಕರಣದಲ್ಲಿ ಸಿಎಂ ಪಾತ್ರ ಇರೋದಾಗಿ ವಾದ ಮುಂದಿಟ್ಟಿದ್ದರು.
ದೂರುದಾರರ ಪರ ವಾದ ಹೀಗಿತ್ತು…
1996-1999 ಅವಧಿಯಲ್ಲಿ ಡಿಸಿಎಂ ಆಗಿದ್ದಾಗ ಡಿನೋಟಿಫೈ ಮಾಡಲಾಗಿದೆ. 2004-2007ರಲ್ಲಿ ಡಿಸಿಎಂ ಆಗಿದ್ದಾಗ ಭೂಪರಿವರ್ತನೆ ಮಾಡಲಾಗಿದೆ. 2013-2018ರವರೆಗೆ ಸಿಎಂ ಆಗಿದ್ದಾಗ ಪರಿಹಾರದ ಸೈಟ್ಗೆ ಅರ್ಜಿ ಸಲ್ಲಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗದೇ ಸೇಲ್ ಡೀಡ್ ಮಾಡಲಾಗಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಹೀಗೆ ಮಾಡಿದ್ದಾರೆ ಎಂದು ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿದ್ದರು.
ಇದಕ್ಕೂ ಮುನ್ನ ಸೆಪ್ಟೆಂಬರ್ 2ರಂದು ವಾದ ಮಂಡಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ್ದ ವಕೀಲ ಕೆ.ಜಿ.ರಾಘವನ್ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17A ಅಡಿ ತನಿಖೆಗೆ ಅನುಮತಿ ಕೋರುವ ಅಗತ್ಯವೇ ಇಲ್ಲ ಅಂತಾ ವಾದಿಸಿದ್ದರು.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ಪೊಲೀಸ್ ಅಧಿಕಾರಿ ತನಿಖೆಗೆ ಅನುಮತಿ ಕೋರುವ ಅಗತ್ಯವೇ ಇಲ್ಲ. ಯಾರೂ ಮನವಿ ಮಾಡದಿದ್ದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು. ಒಬ್ಬ ಸಚಿವ ತನ್ನ ಇಲಾಖೆಯಲ್ಲದೇ ಬೇರೆ ಇಲಾಖೆಯ ಕೆಲಸದ ಮೇಲೆ ಪ್ರಭಾವ ಬೀರಿದರೂ ಅದು ಅಪರಾಧ. ಏನೇ ಅಪರಾಧವಿಲ್ಲದಿದ್ದರೂ ಆಡಳಿತದ ಶುದ್ಧತೆ ಕಾಪಾಡಲೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು. ಹೀಗಾಗಿ ರಾಜ್ಯಪಾಲರ ಆದೇಶದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು. ತನಿಖೆ ಅಗತ್ಯವಿಲ್ಲವೆಂದಾದರೆ ಮುಡಾ ಹಗರಣದ ತನಿಖೆಗೆ ವಿಚಾರಣಾ ಆಯೋಗವನ್ನೇಕೆ ಸರ್ಕಾರ ನೇಮಿಸಿದೆ ಎಂದು ವಕೀಲ ರಾಘವನ್ ಪ್ರಶ್ನಿಸಿದ್ದರು.
ನ್ಯಾಯ ಮೂರ್ತಿಗಳು ಏನು ಹೇಳಿದ್ದರು?
ಇದೇ ವೇಳೆ, ನಿಮಗೆ ಮುಡಾ ಕುರಿತು ನ್ಯಾಯಾಂಗ ಆಯೋಗದ ವಿಚಾರಣೆ ಬಗ್ಗೆ ಸಮಾಧಾನವಿಲ್ಲವೇ ಎಂದು ದೂರುದಾರರ ಪರ ವಕೀಲರಿಗೆ ನ್ಯಾ. ಎಂ.ನಾಗಪ್ರಸನ್ನ ಪ್ರಶ್ನಿಸಿದ್ದರು.
ವಿಚಾರಣಾ ಆಯೋಗಕ್ಕೆ ಯಾವುದೇ ಹಲ್ಲಿಲ್ಲ, ಹೀಗಾಗಿ ಪರಿಣಾಮಕಾರಿಯಲ್ಲ ಎಂದು ರಾಘವನ್ ಪ್ರತಿಪಾದಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಏನು ಮಾಡಿದ್ದಾರೆ, ಸಿಎಂ ಆದ್ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ, ನಿಯಮಗಳನ್ನ ಹೇಗೆ ತಿರುಚಿದ್ದಾರೆ, 2 ಸೈಟ್ ಬದಲು 14 ಸೈಟ್ ಹಂಚಿಕೆ ಆಗಿದ್ದು ಹೇಗೆ ಎಂದು ವಿವರಿಸಿದ್ದರು.
ಸಿಎಂಗೂ ಈ ನಿವೇಶನ ಹಂಚಿಕೆಗೂ ಸಂಬಂಧವೇನೆಂದು ತಾವು ಕೇಳಿದ್ದಿರಿ. ಈ ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಒಂದೋ ಡಿಸಿಎಂ ಆಗಿದ್ದರು ಅಥವಾ ಸಿಎಂ ಆಗಿದ್ದರು. ಸಿಎಂ ಪತ್ನಿಗೆ ಬೇಕಾದಂತೆ ನಿಯಮ ಬದಲಿಸಿಕೊಂಡಿದ್ದಾರೆ. 2022 ರಲ್ಲಿ 50/50 ಅನುಪಾತದಡಿ 14 ಸೈಟ್ ಹಂಚಿಕೆ ಮಾಡಲಾಯಿತು. ಸಿಎಂ ಪತ್ನಿಗೆ ಹಂಚಿಕೆಯಾದ ಬಳಿಕ 2022 ರಲ್ಲಿ 50/50 ಅನುಪಾತದ ಹಂಚಿಕೆ ರದ್ದುಪಡಿಸಲಾಯಿತು. ಸೂಕ್ತ ಮಾಲೀಕತ್ವವೇ ಇಲ್ಲದ, ಒಂದು ಸೈಟ್ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ಹಂಚಿಕೆ ಮಾಡಲಾಗಿದೆ. ಆಡಳಿತದಲ್ಲಿ ಶುದ್ಧತೆ ಕಾಪಾಡಲು ತನಿಖೆಯ ಅಗತ್ಯವಿದೆ. ಹೀಗಾಗಿ ರಾಜ್ಯಪಾಲರ ಆದೇಶದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು ಎಂದು ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಮತ್ತೆ ನಿರಾಳ, ಹೈಕೋರ್ಟ್‌ನಲ್ಲಿ ಇಂದಿನ ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ವಿವರ
ಪ್ರತಿವಾದಿ ವಕೀಲರ ಈ ಎಲ್ಲಾ ವಾದವನ್ನ ಆಲಿಸಿರುವ ಹೈಕೋರ್ಟ್, ಇಂದು ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಅವರ ಅಂತಿಮ ವಾದ ಆಲಿಸಲಿದೆ. ಈಗಾಗ್ಲೇ ರಾಜ್ಯಪಾಲರ ನಡೆ ದುರುದ್ದೇಶಪೂರಿತ ಎಂದು ವಾದಿಸಿರುವ ಸಿಂಘ್ವಿ ತಮ್ಮ ವಾದ ಮಂಡನೆಯನ್ನ ಇಂದು ಪೂರ್ಣಗೊಳಿಸಲಿದ್ದಾರೆ. ಇನ್ನು, ಸಿಎಂ ಪರ ಹಿರಿಯ ವಕೀಲ ರವಿವರ್ಮಕುಮಾರ್ ಕೂಡಾ ವಾದ ಮಂಡಿಸಲಿದ್ದಾರೆ.. ಕೆಸರೆ ಗ್ರಾಮದ ಬಗ್ಗೆ ದೂರುದಾರರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಎಲ್ಲಾ ವಾದ ಆಲಿಸಲಿರುವ ಕೋರ್ಟ್, ಇಂದೇ ಪ್ರಾಸಿಕ್ಯೂಷನ್ ಭವಿಷ್ಯ ನಿರ್ಧರಿಸುವ ಸಾಧ್ಯತೆಯಿದೆ.. ಹೀಗಾಗಿ, ಸಿಎಂ ಸಿದ್ದರಾಮಯ್ಯಗೆ ಆತಂಕ ಶುರುವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ