
ಬೆಂಗಳೂರು, ಜೂನ್ 08: ರವಿವಾರ (ಜೂ.08) ಒಂದೇ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ (Government Bus) ಅಪಘಾತಕ್ಕೀಡಾಗಿವೆ. ಗದಗ, ಮಂಡ್ಯ ಮತ್ತು ಬೆಂಗಳೂರಿನಲ್ಲಿ (Bengaluru) ಸರ್ಕಾರಿ ಬಸ್‌ಗಳು ಅಪಘಾತಕ್ಕೆ ಒಳಗಾಗಿವೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಫ್ಲೈಓವರ್ ಬಳಿ ನಡೆದಿದೆ. ಮೊಹಮ್ಮದ್ ಜಮ್ಷಿರ್ (40) ಮೃತದುರ್ದೈವಿ. ಜಮ್ಷಿರ್ ಪತ್ನಿ ಆಯಿಷಾ, ಮಕ್ಕಳಾದ ಅಲೀಜಾ, ಆಫಿಯಾಗೆ ಗಾಯವಾಗಿದೆ.
ಆಯಿಷಾ ಅವರ ಕಾಲು ಮತ್ತು ಬಲಗೈಗೆ ಗಾಯವಾಗಿದೆ. ಒಂದೂವರೆ ವರ್ಷದ ಮಗು ಆಫಿಯಾ ಬ್ರೈನ್ ಮೂಳೆ ಕಟ್ ಆಗಿದೆ. ನಾಲ್ಕು ವರ್ಷದ ಬಾಲಕಿ ಅಲೀಜಾ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಳುಗಳಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಣ್ಣೂರು ಡಿಪೋ 10ಕ್ಕೆ ಸೇರಿದ KA51 AJ 8655 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿದೆ.
ಮೆಟ್ರೋ ಪಿಲ್ಲರ್ಗೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಓರ್ವ ಪ್ರಯಾಣಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಿಡದಿ ಮೂಲದ ಪ್ರಯಾಣಿಕ ಜಯರಾಮ್ (57) ಮೃತದುರ್ದೈವಿ. ಜೂ.6ರ ರಾತ್ರಿ 8.30ರ ಸುಮಾರಿಗೆ ಬಿಎಂಟಿಸಿ ಬಸ್ ಕೆ.ಆರ್.ಮಾರ್ಕೆಟ್ನಿಂದ ಬಿಡದಿಗೆ ಹೊರಟಿತ್ತು. ಕೆಂಗೇರಿಯ ಮೈಲಸಂದ್ರ ಬಳಿ ಸ್ಟೇರಿಂಗ್ ಸಂಪರ್ಕ ಕಟ್ ಆಗಿದೆ. ನಿಯಂತ್ರಣ ಕಳೆದುಕೊಂಡ ಬಸ್ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಚಾಲಕ, ನಿರ್ವಾಹಕ ಸೇರಿ 12 ಜನ ಗಾಯಗೊಂಡಿದ್ದರು. ಗಾಯಾಳುಗಳನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಡ್ಯ: ಶ್ರೀರಂಗಪಟ್ಟಣ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶ್ರೀರಂಗಪಟ್ಟಣದ ಚೆಕ್ ಪೋಸ್ಟ್ ಬಳಿಯ ಸೇತುವೆ ಮೇಲೆ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹ ಮತ್ತು ಗಾಯಾಳುವನ್ನು ಶ್ರೀರಂಗಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಅಸೋಸಿಯೇಷನ್ ದೂರು
ಗದಗ: ಎಕ್ಸಲ್ ಕಟ್ ಆಗಿ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಬಿದ್ದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಘಟನೆ ನಡೆದಿದೆ. ಬಸ್ ವಡ್ಡಟ್ಟ ಗ್ರಾಮದಿಂದ ಮುಂಡರಗಿ ಪಟ್ಟಕ್ಕೆ ಹೊರಟಿತ್ತು. ಸಿರೊಳ ಗ್ರಾಮದ ಬಳಿ ಏಕಾಏಕಿ ಎಕ್ಸಲ್ ಕಟ್ ಆಗಿದೆ. ಕೂಡಲೇ ಬಸ್ನ ವೇಗ ಕಡಿಮೆ ಮಾಡಿದ್ದಾನೆ. ನಂತರ ಬಸ್ ಚಾಲಕನ ನಿಯಂತ್ರಣ ತಪ್ಪಿ ತಗ್ಗಿಗೆ ಬಿದ್ದಿದೆ. ಇದರಿಂದ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳವಾಗಿವೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.