
ನವದೆಹಲಿ: ವಿದೇಶದಲ್ಲಿ ನಿಧನರಾದ ಭಾರತದ ಯುವಕನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಕೇಂದ್ರ ಸರ್ಕಾರ ಸ್ಪಂದಿಸಿದೆ. ಕಳೆದ ಭಾನುವಾರದಂದು ಸ್ವೀಡನ್ನಲ್ಲಿ ಕರ್ನಾಟಕದ ಮೈಸೂರು ಮೂಲದ 26 ವರ್ಷದ ಇಂಜಿನಿಯರ್ ಮನೋಜ್ ರಾಮಧ್ಯಾನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಅದರಂತೆ ಮನೋಜ್ ಅವರ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಿ ಅವರ ಕುಟುಂಬಕ್ಕೆ ತಲುಪಿಸುವಂತೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕೋರಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಜೋಶಿ ಅವರ ಮಾತುಕತೆ ಫಲವಾಗಿ ವಿದೇಶಾಂಗ ಸಚಿವಾಲಯವು ಮನೋಜ್ ಅವರ ಮೃತದೇಹ ಭಾರತಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸ್ವೀಡನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಮಾತುಕತೆ ನಡೆಸಿದ್ದು, ಮೃತದೇಹವನ್ನು ಭಾರತಕ್ಕೆ ತರುವ ಕಾರ್ಯಕ್ಕೆ ಸ್ಪಂದನೆ ಸಿಕ್ಕಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯವು ಪೇಜಾವರ ಶ್ರೀಗಳಿಗೆ ಮಾಹಿತಿ ನೀಡಿದೆ.
ಮೃತದೇಹದ ಹಸ್ತಾಂತರದ ಜೊತೆಗೆ ಮನೋಜ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಂಪನಿಯಿಂದ ಒದಗಬಹುದಾದ ವಿಮೆ ಹಾಗೂ ಇತರ ನೆರವನ್ನು ಒದಗಿಸುವ ನಿಟ್ಟಿನಲ್ಲೂ ಸಚಿವ ಪ್ರಲ್ಹಾದ್ ಜೋಶಿ ಅವರು ಸಹಕರಿಸಿದ್ದಾರೆ. ಮನವಿಗೆ ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರದ ವಿದೇಶಾಂಗ ಸಚಿವ ಜೈಶಂಕರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿದೇಶಾಂಗ ಸಚಿವಾಲಯದ ಎಲ್ಲ ಅಧಿಕಾರಿಗಳು ಮತ್ತು ಭಾರತ-ಸ್ವೀಡನ್ ದೇಶದ ರಾಯಭಾರ ಕಚೇರಿಯ ಎಲ್ಲ ಅಧಿಕಾರಿಗಳಿಗೆ ಶ್ರೀಗಳು ಆಭಾರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Thu, 15 September 22