ಆದಾಯ ಮೀರಿ ಆಸ್ತಿ ಗಳಿಕೆ, ಕೋಟ್ಯಂತರ ರೂ. ಬೆಲೆಬಾಳುವ ಭವ್ಯ ಬಂಗಲೆ: ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಲೆಕ್ಕದ ಪುಸ್ತಕ ಎಸಿಬಿಗೆ ಲಭ್ಯ
ವಿದೇಶದಿಂದ ಲೈಟ್ಸ್, ಫರ್ನಿಚರ್ಸ್, ದುಬಾರಿ ಒಳಾಂಗಣ ವಿನ್ಯಾಸ ಪರಿಕರಗಳನ್ನ ತರಿಸಿ ಅಳವಡಿಕೆ ಮಾಡಿರುವುದು ಕೂಡಾ ತಿಳಿದುಬಂದಿದ್ದು, ಮೈಸೂರಿನಲ್ಲಿ 60x80 ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಐಶಾರಾಮಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ.
ಬೆಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ಎಸಿಬಿ ತನಿಖೆ ವೇಳೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭವ್ಯ ಬಂಗೆಲೆಯ ಪಕ್ಕಾ ಲೆಕ್ಕ ಬಯಲಾಗಿದೆ. ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಎಂಬುವವರು ಬರೋಬ್ಬರಿ 5 ಕೋಟಿ ರೂಪಾಯಿಗೂ ಅಧಿಕ ಹಣದಲ್ಲಿ ನಿರ್ಮಿಸಿದ ಬಂಗಲೆ ಲೆಕ್ಕದ ಪುಸ್ತಕ ಎಸಿಬಿಗೆ ಲಭ್ಯವಾಗಿದೆ. ಮೈಸೂರಿನಲ್ಲಿ ಸೋದರಮಾವನ ಉಸ್ತುವಾರಿಯಲ್ಲಿ ನಿರ್ಮಿಸುತ್ತಿದ್ದ ಐಶಾರಾಮಿ ಬಂಗಲೆಯ ಫೋಟೋ ಕೂಡಾ ಹೊರಬಿದ್ದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಆದಾಯ ಮೀರಿ ಈ ಪರಿ ಆಸ್ತಿ ಗಳಿಸಿರುವುದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ.
ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಬಲವಾಗಿ ಕೇಳಿಬಂದಿದ್ದು, ಟಿವಿ9ಗೆ ಭವ್ಯ ಅರಮನೆ ನಿರ್ಮಾಣದ ಲೆಕ್ಕದ ರಹಸ್ಯ ಸಿಕ್ಕಿದೆ. ವಿದೇಶದಿಂದ ಲೈಟ್ಸ್, ಫರ್ನಿಚರ್ಸ್, ದುಬಾರಿ ಒಳಾಂಗಣ ವಿನ್ಯಾಸ ಪರಿಕರಗಳನ್ನ ತರಿಸಿ ಅಳವಡಿಕೆ ಮಾಡಿರುವುದು ಕೂಡಾ ತಿಳಿದುಬಂದಿದ್ದು, ಮೈಸೂರಿನಲ್ಲಿ 60×80 ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಐಶಾರಾಮಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ವಿಕ್ಟರ್ ಸೈಮನ್ ಬೆಳ್ಳಂದೂರು ಇನ್ಸ್ಪೆಕ್ಟರ್ ಆಗಿದ್ದ ವೇಳೆ ಖಾಸಗಿ ಕಂಪೆನಿ ಫೈನಾನ್ಸ್ ವಿಚಾರದಲ್ಲಿ ತಲೆ ಹಾಕಿದ್ದರು ಎನ್ನಲಾಗಿದ್ದು, ಆ ವೇಳೆ 1.25 ಕೋಟಿ ರೂಪಾಯಿ ಲಂಚ ಪಡೆದು ಪಕ್ಷಪಾತದಿಂದ ಅನುಕೂಲ ಮಾಡಿಕೊಟ್ಟ ಆರೋಪ ಕೇಳಿಬಂದಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಅವರ ಭವ್ಯ ಬಂಗಲೆ ಕಣ್ಣಿಗೆ ಬಿದ್ದಿದೆ.
ಮೈಸೂರಿನ ಎಚ್.ಡಿ ಕೋಟೆಯಲ್ಲಿ ವಿಕ್ಟರ್ ಸೈಮನ್ ಗೆ ಸೇರಿದ 3 ಎಕರೆ ಜಮೀನು ಕೂಡಾ ಇದ್ದು, ಇದೀಗ ನಿರ್ಮಿಸುತ್ತಿರುವ ಮನೆ ಅರಮನೆಯಂತಿದೆ. ದುಬಾರಿ ಬೆಲೆಯ ವಿದೇಶಿ ಆಮದು ಪರಿಕರಗಳಿಂದ ಬಂಗಲೆ ಒಳ ವಿನ್ಯಾಸ ಮಾಡಲಾಗಿದ್ದು ಅದರ ಜಗಮಗಿಸುವ ವಿದೇಶಿ ಲೈಟಿಂಗ್ಸ್, ಸ್ವಿಮ್ಮಿಂಗ್ ಪೂಲ್, ಡೈನಿಂಗ್ ಹಾಲ್, ಡ್ರಾಯಿಂಗ್ ರೂಮ್, ಲಿವಿಂಗ್ ಹಾಲ್ ಪೋಟೊಗಳು ಲಭ್ಯವಾಗಿದೆ.
2003 ರಲ್ಲಿ ಪಿಎಸ್ ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ವಿಕ್ಟರ್ ಸೈಮನ್, ಕಳೆದ 18 ವರ್ಷಗಳ ಸೇವಾವಧಿಯಲ್ಲಿ ಕೋಟಿ ಕೋಟಿ ಆದಾಯ ಗಳಿಸಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಸದ್ಯ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಎಸಿಬಿ ಸುಮೋಟೊ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ. ಎಸಿಬಿ ಬಂಧನ ವೇಳೆ ಬಿಎಂಟಿಎಫ್ ಇನ್ಸ್ಪೆಕ್ಟರ್ ಆಗಿದ್ದ ವಿಕ್ಟರ್ ಸೈಮನ್, ಇನ್ಸ್ ಪೆಕ್ಟರ್ ಆಗಿ ಪ್ರಮೋಷನ್ ಪಡೆದು ಬೆಂಗಳೂರಿನ ವಿವಿಧ ಠಾಣೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಎಸಿಬಿ ದಾಳಿ ವೇಳೆ ಒಂದಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಮೈಸೂರಿನ ಐಶಾರಾಮಿ ಬಂಗಲೆ ಲೆಕ್ಕದ ಪುಸ್ತಕವೇ ವಿಕ್ಟರ್ ಸೈಮನ್ಗೆ ಕುತ್ತಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
(ACB investigation on Police Inspector Victor Simon Bungalow in Mysuru)
ಇದನ್ನೂ ಓದಿ: ಲಂಚ ಪಡೆದ ಸರ್ಕಾರಿ ವೈದ್ಯೆ, ನರ್ಸ್ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ
IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ