
ಮೈಸೂರು: ಬೆಂಗಳೂರು-ಮೈಸೂರು ಎಕ್ಸಪ್ರೆಸ್ ವೇಯಲ್ಲಿ (Bengaluru-Mysuru Expressway) ಅಪಘಾತ ಹೆಚ್ಚದಾ ಹಿನ್ನೆಲೆ ಇತ್ತೀಚಿಗೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಘಾತ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಇದೀಗ ಎಕ್ಸಪ್ರೆಸ್ ವೇನಲ್ಲಿ ಎಎನ್ಪಿಆರ್ ಕ್ಯಾಮೆರಾ ಅಳವಡಿಸಲಾಗಿದೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition-ANPR) ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಈ ಮೂಲಕ ಮಿತಿಗಿಂತ ಅತಿವೇಗದ ಚಾಲನೆ ಮತ್ತು ಒನ್ವೇನಲ್ಲಿ ವಾಹನ ಚಾಲಯಿಸಿದರೇ ಬೆಂಗಳೂರು ಸಂಚಾರ ಪೊಲೀಸರು ದಂಡ ಹಾಕುತ್ತಾರೆ. ಇನ್ನು ರಾಮನಗರ ಪೊಲೀಸರು ವಾಹನದ ವೇಗ ಕಂಡು ಹಿಡಿಯುವ ಇಂಟರ್ ಸೆಪ್ಟರ್ ಬಳಕೆಗೆ ಸಿದ್ದವಾಗಿದ್ದಾರೆ. ಇಂದಿನಿಂದ ಹೈವೇ ಮೇಲೆ ಇಂಟರ್ ಸೆಪ್ಟರ್ (ಸ್ಪೀಡ್ ರಾಡರ್ ಗನ್) ಬಳಸಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಎಸ್ಒಎಸ್ ಬಾಕ್ಸ್; ಏನಿದು, ಬಳಸುವುದು ಹೇಗೆ?
ರಾಮನಗರ ಜಿಲ್ಲೆಯಲ್ಲಿ 55 ಕಿಮೀ, ಮಂಡ್ಯದಲ್ಲಿ 58 ಕಿಮೀ ಹಾಗೂ ಮೈಸೂರಿನಲ್ಲಿ 5 ಕಿಮೀ ಸೇರಿ ಒಟ್ಟು 118 ಕಿಮೀ ದೂರದ ಧಶಪಥ ಇದಾಗಿದೆ. ಈ ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಲ್ಲಿ (2022 ರ ಸೆಪ್ಟೆಂಬರ್ ನಿಂದ 2023 ರ ಜೂನ್ ವರೆಗೆ) 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ.
ಕೇವಲ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಹೊಸ ಬೈಪಾಸ್ ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಆಘಾತಕಾರಿ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ