ಮೈಸೂರು, ಜನವರಿ 20: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಈ ರಾಮಲಲ್ಲಾನ ಮೂರ್ತಿಯನ್ನು ನಮ್ಮ ಮೈಸೂರಿನ ಅರುಣ ಯೋಗಿರಾಜ ಅವರು ಕೆತ್ತಿದ್ದಾರೆ. ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಹೆಚ್ಡಿ ಕೋಟೆ ತಾಲೂಕಿನ ಹಾರೋಹಳ್ಳಿಯಲ್ಲಿ ದೊರೆತಿದೆ. ರಾಮಲಲ್ಲಾ ಮೂರ್ತಿ ಕೆತ್ತನೆಗೆ ಮಾತ್ರವಲ್ಲದೆ ಸೀತಾ, ಲಕ್ಷ್ಮಣ, ಹನುಮಂತ, ಭರತ ಮತ್ತು ಶತೃಘ್ನರ ವಿಗ್ರಹ ಕೆತ್ತನೆಗೂ ಮೈಸೂರಿ ಹಾರೋಹಳ್ಳಿ ಗ್ರಾಮದಲ್ಲಿನ ಶಿಲೆಯನ್ನೇ ಬಳಸಲಾಗುತ್ತದೆ.
ಈ ಬಗ್ಗೆ ರಾಮಲಲ್ಲಾ ವಿಗ್ರಹಕ್ಕೆ ಶಿಲೆ ತೆಗೆದುಕೊಟ್ಟ ಹಾರೋಹಳ್ಳಿ ಗ್ರಾಮದ ಶ್ರೀನಿವಾಸ್ ಮಾತನಾಡಿ, ರಾಮಲಲ್ಲಾ ವಿಗ್ರಹದ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ, ಭರತ, ಶತೃಘ್ನ ವಿಗ್ರಹ ಕೆತ್ತನೆಗೂ ಇಲ್ಲಿಯ ಶಿಲೆಯನ್ನು ಬಳಸಲಾಗುತ್ತದೆ. ರಾಮಲಲ್ಲಾ ವಿಗ್ರಹ ಕೆತ್ತನೆಗೆ 9 ಅಡಿ 8 ಇಂಚು ಅಡಿ ಉದ್ದ, 4 ಅಡಿ ಅಗಲದ ಶಿಲೆಯನ್ನು ಬಳಸಲಾಗಿದೆ ಎಂದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ
ಸೀತಾ ವಿಗ್ರಹಕ್ಕೆ 7 ಅಡಿ ಉದ್ದ 4 ಅಡಿ ಅಗಲದ ಶಿಲೆ ಬಳಸಲಾಗುತ್ತದೆ. ಭರತ ವಿಗ್ರಹಕ್ಕೆ 5 ಅಡಿ ಉದ್ದ 5 ಅಡಿ ಅಗಲದ ಶಿಲೆ ಉಪಯೋಗಿಸಲಾಗುತ್ತದೆ. ಲಕ್ಷ್ಮಣ ವಿಗ್ರಹಕ್ಕೆ 6 ಅಡಿ ಉದ್ದ 5 ಅಡಿ ಅಗಲದ ಶಿಲೆ ಬಳಸಲಾಗುತ್ತದೆ. ಶತೃಘ್ನ ವಿಗ್ರಹಕ್ಕೆ 5 ಅಡಿ ಉದ್ದ 4 ಅಡಿ ಅಗಲದ ವಿಗ್ರಹ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಎಲ್ಲಾ ಶಿಲೆಗಳು ನಂಬರ್ ಒನ್ ಆಗಿವೆ. ಸುಮಾರು ವರ್ಷಗಳಿಂದ ಶಿಲೆ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಈ ರೀತಿಯ ಶಿಲೆ ಹಿಂದೆ ಸಿಕ್ಕಿಲ್ಲ ಮುಂದೆ ಸಿಗುವುದಿಲ್ಲ. ನಾನು ಶಿಲೆಯನ್ನು ಮೊದಲು ನೋಡಿದೆ. ಇದೀಗ ಶಿಲೆ ಮೂರ್ತಿ ರೂಪವಾಗಿದೆ. ರಾಮಲಲ್ಲಾ ಮೂರ್ತಿ ನೋಡಬೇಕು ಅಂತಾ ತುಂಬಾ ಆಸೆಯಾಗುತ್ತಿದೆ. ದಯಮಾಡಿ ಅವಕಾಶ ಮಾಡಿ ಕೊಡಿ ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ. ಇನ್ನು ಈ ಶಿಲೆ ಹಾರೋಹಳ್ಳಿ ಗ್ರಾಮದ ರಾಮದಾಸ್ ಎಂಬುವರ ಜಮೀನಿನಲ್ಲಿ ದೊರೆತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ