Mysuru News: ಮೈಸೂರಿನಲ್ಲಿ ಮುಂದುವರಿದ ಪುಂಡರ ಅಟ್ಟಹಾಸ; ವಿವಿಧ ರಸ್ತೆಗಳಲ್ಲಿ ಪುಂಡು ಪೋಕರಿಗಳಿಂದ ಬೈಕ್ ವ್ಹೀಲಿಂಗ್
ಘಟನೆ ನಂತರ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಪರಾರಿಯಾಗಿದ್ದರು. ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು, ಜುಲೈ 20: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಪುಂಡರ ಅಟ್ಟಹಾಸ ಮುಂದುವರಿದಿದ್ದು, ನಗರದ ವಿವಿಧ ರಸ್ತೆಗಳಲ್ಲಿ ಪುಂಡು ಪೋಕರಿಗಳು ಬೈಕ್ ವ್ಹೀಲಿಂಗ್ ನಡೆಸುವುದು ಮುಂದುವರಿದಿದೆ. ಕೆಲವರು ವ್ಹೀಲಿಂಗ್ (Wheeling) ಮಾಡುತ್ತಲೇ ಶಿಕ್ಷಕಿಯೊಬ್ಬರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಜುಲೈ 18ರಂದು ನಡೆದಿದೆ. ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಪುಂಡರು ಗಾಯತ್ರಿಪುರಂನ ಚರ್ಚ್ ಬಳಿ ವ್ಹೀಲಿಂಗ್ ಮಾಡುತ್ತಾ ಅವರ ದ್ವಿಚಕ್ರ ವಾಹನಕ್ಕೆ ಕೆಟಿಎಂ ಬೈಕ್ ಡಿಕ್ಕಿಹೊಡೆದಿದ್ದಾರೆ. ಇದರಿಂದ ಕೆಳಬಿದ್ದ ಶಿಕ್ಷಕಿ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆತಪ್ಪಿದ್ದಾರೆ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಶಿಕ್ಷಕಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆ ನಂತರ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಪರಾರಿಯಾಗಿದ್ದರು. ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲೂ ವ್ಹೀಲಿಂಗ್
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸರ್ವಿಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕನನ್ನು ಬಿಡದಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಯನ್ನು ರಾಮನಗರ ಜಿಲ್ಲೆಯ ಬಾನಂದೂರು ಗ್ರಾಮದ ದರ್ಶನ್ ಎಂದು ಗುರುತಿಸಲಾಗಿದೆ.
ದರ್ಶನ್ ಕೇತಗಾನಹಳ್ಳಿ ಬಳಿ ವ್ಹೀಲಿಂಗ್ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ದರ್ಶನ್ ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಂಚಾರ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: Bengaluru Mysuru Highway: ಎಕ್ಸ್‌ಪ್ರೆಸ್ ವೇನಲ್ಲೂ ಶುರುವಾಯ್ತು ವ್ಹೀಲಿಂಗ್, ಪುಂಡರ ಹೆಡೆಮುರಿ ಕಟ್ಟಿದ ಪೊಲೀಸ್ರು
ಈ ತಿಂಗಳ ಆರಂಭದಲ್ಲಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸ್ಟಂಟ್‌ಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರಾಮನಗರ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Thu, 20 July 23