ಮೈಸೂರು ಪಾಲಿಕೆಯಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರ ಸರ್ಕಸ್​; ಮೇಯರ್​ ಚುನಾವಣೆ ಬೆನ್ನಲ್ಲೇ ಸಾ.ರಾ.ಮಹೇಶ್ ಕಚೇರಿಗೆ ಭೇಟಿ

ಮೈಸೂರು ಮೇಯರ್​ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಈ ಬೆಳವಣಿಗೆಗಳು ಕಂಡು ಬಂದಿದ್ದು, ಹೇಗಾದರೂ ಮಾಡಿ ಮೊದಲ ಬಾರಿಗೆ ಬಿಜೆಪಿಯನ್ನು ಪಾಲಿಕೆಯಲ್ಲಿ ಅಧಿಕಾರಕ್ಕೇರಿಸಬೇಕು ಎಂದು ಪ್ರಯತ್ನಿಸುತ್ತಿರುವಂತಿದೆ. ಇದೇ ಕಾರಣಕ್ಕಾಗಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಅವರನ್ನು ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿಸಿದ್ದಾರೆ ಎನ್ನಲಾಗಿದೆ.

ಮೈಸೂರು ಪಾಲಿಕೆಯಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರ ಸರ್ಕಸ್​; ಮೇಯರ್​ ಚುನಾವಣೆ ಬೆನ್ನಲ್ಲೇ ಸಾ.ರಾ.ಮಹೇಶ್ ಕಚೇರಿಗೆ ಭೇಟಿ
ಬಿಜೆಪಿ - ಜೆಡಿಎಸ್​ ನಾಯಕರ ಭೇಟಿ
Follow us
| Updated By: Skanda

Updated on: Aug 20, 2021 | 9:31 PM

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ನಾಯಕರು ಪಣ ತೊಟ್ಟಂತೆ ಕಾಣುತ್ತಿದೆ. ಮೈಸೂರು ಮೇಯರ್ ಚುನಾವಣೆ ಹತ್ತಿರಾಗುತ್ತಿದ್ದಂತೆಯೇ ರಾಜಕೀಯ ಓಡಾಟ ಬಲು ಜೋರಾಗಿದ್ದು ಬಿಜೆಪಿ ನಾಯಕರು ಜೆಡಿಎಸ್​ ಶಾಸಕ ಸಾ.ರಾ.ಮಹೇಶ್ ಅವರನ್ನು ಭೇಟಿಯಾಗಿದ್ದಾರೆ. ಸಚಿವ S.T.ಸೋಮಶೇಖರ್​ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರನ್ನು ಮೈಸೂರಿನ ಕಚೇರಿಯಲ್ಲಿ ಭೇಟಿಯಾಗಿದ್ದು ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಸಾಥ್​ ನೀಡಿದ್ದಾರೆ.

ಮೈಸೂರು ಮೇಯರ್​ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಈ ಬೆಳವಣಿಗೆಗಳು ಕಂಡು ಬಂದಿದ್ದು, ಹೇಗಾದರೂ ಮಾಡಿ ಮೊದಲ ಬಾರಿಗೆ ಬಿಜೆಪಿಯನ್ನು ಪಾಲಿಕೆಯಲ್ಲಿ ಅಧಿಕಾರಕ್ಕೇರಿಸಬೇಕು ಎಂದು ಪ್ರಯತ್ನಿಸುತ್ತಿರುವಂತಿದೆ. ಇದೇ ಕಾರಣಕ್ಕಾಗಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಅವರನ್ನು ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿಸಿದ್ದಾರೆ ಎನ್ನಲಾಗಿದೆ. ಆದರೆ, ಭೇಟಿಯ ನಡುವೆ ಅವರ ನಡುವೆ ಏನೆಲ್ಲಾ ಮಾತುಕತೆ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಪ್ರತಾಪ್​ ಸಿಂಹ – ರೋಹಿಣಿ ಸಿಂಧೂರಿ ಮನಸ್ತಾಪದ ಮತ್ತೊಂದು ಮಜಲು ಸಂಸದ ಪ್ರತಾಪ್ ಸಿಂಹ, ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ವಾಕ್ಸಮರವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಸಂಸದ ಪ್ರತಾಪ್ ಸಿಂಹ​ ಒತ್ತಾಯಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಕ್ಸಮರ ಮುಂದುವರಿಸಿದ್ದು, ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬೇಕಿದ್ದರೆ ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯ ಖಾತೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲಿ ಮಾಹಿತಿ ಹಾಕಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಫೇಜ್ ಗಳಿಂದ (fan page on social media) ಹೊಗಳಿಕೆಗಳು ಸೃಷ್ಟಿಯಾಗುತ್ತಿವೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ-ಹೀಗೆ ಅಂತೆಲ್ಲಾ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ​ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು: ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರೆ ಜೆಡಿಎಸ್​ ಜೊತೆಗೆ ಮೈತ್ರಿ: ಬಿಜೆಪಿ ಅಧ್ಯಕ್ಷ ಶ್ರೀವತ್ಸ 

Mysuru Mayor Election: ಮೈಸೂರು ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್, ಆಗಸ್ಟ್ 25ರಂದು ಚುನಾವಣೆ

(BJP Leaders trying to get Mayor seat in Mysore City Corporation they meet Sa Ra Mahesh today)