ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ತಮಿಳುನಾಡು ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ
ಕಾವೇರಿ ನದಿಗೆ ಸಂಬಂಧಪಟ್ಟ ಯಾವ ಯೋಜನೆ ಜಾರಿಗೊಳಿಸಬೇಕು. ಯಾವುದು ಜಾರಿಗೊಳಿಸಬಾರದು ಎಂದು ತೀರ್ಮಾನಿಸುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಮೇಕೆದಾಟು ಯೋಜನೆ ಸಂಬಂಧ 16 ರಿಂದ 17 ಸಭೆಗಳು ಆಗಿವೆ ಅಂತ ಸಿಎಂ ಹೇಳಿದರು.
ಮೈಸೂರು: ಮೇಕೆದಾಟು ಯೋಜನೆಗೆ (Mekedatu Project) ತಡೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಖಂಡನೆ ವ್ಯಕ್ತಪಡಿಸಿದ್ದಾರೆ. ಕೇಂದ್ರಕ್ಕೆ ಸೂಚನೆ ನೀಡುವಂತೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಸುಪ್ರೀಂಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ಸರಿಯಾದ ಕ್ರಮವಲ್ಲ. ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಕೊಟ್ಟಿತ್ತು. ನೋಟಿಸ್ಗೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಾಧಿಕಾರ ರಚಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆಗೆ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾವೇರಿ ನದಿಗೆ ಸಂಬಂಧಪಟ್ಟ ಯಾವ ಯೋಜನೆ ಜಾರಿಗೊಳಿಸಬೇಕು. ಯಾವುದು ಜಾರಿಗೊಳಿಸಬಾರದು ಎಂದು ತೀರ್ಮಾನಿಸುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಮೇಕೆದಾಟು ಯೋಜನೆ ಸಂಬಂಧ 16 ರಿಂದ 17 ಸಭೆಗಳು ಆಗಿವೆ ಅಂತ ಸಿಎಂ ಹೇಳಿದರು.
ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ವರ್ಧಂತ್ಯೋತ್ಸವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ಸಚ್ಚಿದಾನಂದ ಶ್ರೀಗಳು ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಿದ್ದಾರೆ. ಆರೋಗ್ಯ ಶಿಕ್ಷಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಒಂದು ಕೋಟಿ ದತ್ತಾತ್ರೇಯ ಜಪ ನಡೆಯುತ್ತಿದೆ. ಇದು ಲೋಕಕಲ್ಯಾಣಕ್ಕಾಗಿ ಮಾತ್ರ ಅಲ್ಲ ಕರ್ನಾಟಕದ ಅಭಿವೃದ್ಧಿಗೆ ಪೂರಕ. ಸಂಕಲ್ಪದ ಪರಾಕಾಷ್ಠೆಯ ಸ್ವರೂಪವಾಗಿ ಜಪ ತಪ ಮಾಡುತ್ತಿದ್ದಾರೆ. ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ. ನಮ್ಮ ಪ್ರಾರ್ಥನೆ ಲೋಕ ಕಲ್ಯಾಣಕ್ಕಾಗಿದ್ದರೆ ಅದಕ್ಕೆ ಭಗವಂತನ ಅನುಗ್ರಹ ಇರುತ್ತದೆ. ಸ್ವಾರ್ಥವಿಲ್ಲದ ಬೇಡಿಕೆಗಳನ್ನು ಭಗವಂತ ಈಡೇರಿಸುತ್ತಾನೆ ಎಂದರು.
ಇದನ್ನೂ ಓದಿ: 5 ದಿನದಲ್ಲಿ 75 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆ; ಏನಿದರ ವಿಶೇಷತೆ? ನಾನು ಹುಟ್ಟಿ ಬೆಳಿದಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ. ಹೀಗಾಗಿ ನನ್ನ ಅರಿವು ಬಂದಾಗಿನಿಂದ ನಮಸ್ಕಾರ ಮಾಡುವುದು ದತ್ತಾತ್ರೇಯನಿಗೆ. ಅತ್ಯಂತ ಚಿಕ್ಕವಯಸ್ಸಿನಲ್ಲೇ ನನಗೆ ದತ್ತಾತ್ರೇಯನ ಆಶೀರ್ವಾದ ಸಿಕ್ಕಿತ್ತು. ಇಂದು ದತ್ತಾತ್ರೇಯ ಸನ್ನಿಧಿಗೆ ಬಂದಾಗ ಅದೆಲ್ಲವೂ ನೆನಪಾಯಿತು. ನಿಮ್ಮ ಆಶೀರ್ವಾದದಿಂದ ರಾಜ್ಯ ಸಮೃದ್ಧಿಯಾಗಲಿ. ಎಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಆಶ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Wed, 8 June 22