ಮೈಸೂರು: ಕಲ್ಲಿದ್ದಲು ಕೊರತೆಯಿಂದ ದೇಶದಲ್ಲಿ ಎದುರಾಗಿರುವ ವಿದ್ಯುತ್ ಬಿಕ್ಕಟ್ಟಿಗೆ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎನ್ನುವ ಇಂಧನ ಸಚಿವರ ಹೇಳಿಕೆ ಪ್ರಸ್ತಾಪಿಸಿದರು. ಕಲ್ಲಿದ್ದಲಿನ ಹೆಚ್ಚುವರಿ ಹಂಚಿಕೆ ಲಭ್ಯವಾಗುತ್ತಿಲ್ಲ. ಬಿಜೆಪಿಯವರು ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ತೊಂದರೆಯಾಗುತ್ತಿದೆ. ಕಲ್ಲಿದ್ದಲಿನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದರು.
ಕಲ್ಲಿದ್ದಲು ಉತ್ಪಾದನೆಯು ಇದ್ದಕ್ಕಿದ್ದಂತೆ ನಿಂತು ಹೋಗಲು ಸಾಧ್ಯವೇ? ಅಧಿಕಾರಿಗಳು ಯಾವ ಸಚಿವರ ಮಾತನ್ನೂ ಕೇಳುತ್ತಿಲ್ಲ. ಬಿಜೆಪಿ ಸಚಿವರಿಗೂ ಇದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕರ್ನಾಟಕ ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಲ್ಲಿದ್ದಲ ಕೊರತೆ ಇಲ್ಲ. ಆದರೆ ಸರ್ಕಾರಕ್ಕೆ ಈ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕಲ್ಲಿದ್ದಲು ಲಭ್ಯತೆ ಸಮರ್ಪಕವಾಗಿದ್ದರೂ ಹಂಚಿಕೆ ಮಾಡುವಲ್ಲಿ ಸರ್ಕಾರಕ್ಕೆ ಸಮಸ್ಯೆಯಾಗಿದೆ. ಇದೊಂದು ಭ್ರಷ್ಟ ಸರ್ಕಾರ ಎಂದು ದೂರಿದರು.
ಕರ್ನಾಟಕದಲ್ಲಿ ಸರ್ಕಾರವೆಂಬುದು ಸತ್ತು ಹೋಗಿದೆ. ಮುಖ್ಯಮಂತ್ರಿ, ಗೃಹ ಮಂತ್ರಿ ಇಬ್ಬರೂ ಅಸಮರ್ಥರಿದ್ದಾರೆ. ಬಿಜೆಪಿಯವರಿಗೆ ಆಡಳಿತ ಮಾಡಲು ಬರುತ್ತಿಲ್ಲ. ಎಲ್ಲ (ನೇಮಕಾತಿ) ಪರೀಕ್ಷೆಗಳಲ್ಲೂ ದುಡ್ಡು, ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದವರು ಇವರ ಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣವಿದೆ ಎಂಬ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಆರೋಪಕ್ಕೆ ಟಾಂಗ್ ಕೊಟ್ಟ ಅವರು, ಯಡಿಯೂರಪ್ಪನ ಮಕ್ಕಳು ಯಾರು? ಬಿಜೆಪಿಗೆ ಬೇರೆಯವರನ್ನು ಟೀಕಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಯುವತಿ ಮೇಲೆ ಆಸಿಡ್ ಎರಚಿದ ಆರೋಪಿಯೂ ಇನ್ನೂ ಕೈಗೆ ಸಿಗದ ಕುರಿತು ಪ್ರಸ್ತಾಪಿಸಿದ ಅವರು, ಕೇವಲ ಆಸಿಡ್ ದಾಳಿ ವಿಚಾರದಲ್ಲಿ ಮಾತ್ರವೇ ಅಲ್ಲ. ಎಲ್ಲ ವಿಚಾರಗಳಲ್ಲೂ ಗೃಹ ಇಲಾಖೆ ವಿಫಲವಾಗಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲೂ ವಿಫಲವಾಗಿತ್ತು. ಸಚಿವರೇ 144 ಸೆಕ್ಷನ್ ಉಲ್ಲಂಘನೆ ಮಾಡಿದರೂ ಕ್ರಮ ಕೈಗೊಂಡಿರಲಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ ಮೂಲದವರು ಅಲ್ಲ. ಹೀಗಾಗಿಯೇ ಅವರನ್ನು ಬದಲಿಸಲು ಆರ್ಎಸ್ಎಸ್ನವರು ಹೊರಟಿದ್ದಾರೆ. ಬಸವರಾಜ ಬೊಮ್ಮಾಯಿ ಜನತಾ ಪರಿವಾರದವರು. ನಮ್ಮ ಜೊತೆಯಲ್ಲೇ ಇದ್ದವರು. ಆದರೆ ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ಟೀಕಿಸಿದರು.
ಈ ಸರ್ಕಾರದಲ್ಲಿ ಎಲ್ಲ ನೇಮಕಾತಿ, ವರ್ಗಾವಣೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. 545 ಪಿಎಸ್ಐಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ತಾತ್ಕಾಲಿಕ ನೇಮಕಾತಿ ಪಟ್ಟಿ ವಜಾಗೊಳಿಸಿದ್ದರಿಂದ ಪ್ರಾಮಾಣಿಕವಾಗಿ ಪಿಎಸ್ಐ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯದಿಂದ ಇದೆಲ್ಲವೂ ನಡೆಯುತ್ತಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬರಲಿ ಎಂದು ಜನ ಕಾಯುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವನ್ನು ಜನ ಕಿತ್ತೊಗೆಯುತ್ತಾರೆ ಎಂದು ಹೇಳಿದರು.
ಬಿಜೆಪಿ ಬಗ್ಗೆ ಮಾತನಾಡಲು ಹಕ್ಕಿಲ್ಲ: ಸಿಟಿ ರವಿ
ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಮ್ಮ ಪಾರ್ಟಿಗೆ ಸೇರಿದರೆ ಮಾತ್ರ ಮಾತನಾಡುವ ಅರ್ಹತೆ ಇದೆ. ಸಿದ್ದರಾಮಯ್ಯ ಯಾವಾಗ ಬಿಜೆಪಿ ಸೇರುತ್ತಾರೆ ಎಂದು ಹೇಳಲಿ ಎಂದು ತಿರುಗೇಟುಕೊಟ್ಟರು.
ಸಿದ್ದರಾಮಯ್ಯನವರಿಗೆ ತಮ್ಮ ಭವಿಷ್ಯದ ಬಗ್ಗೆಯೇ ಗ್ಯಾರಂಟಿ ಇಲ್ಲ. ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಎರಡು ಬಾರಿ ಮೋದಿ ಪ್ರಧಾನಿಯಾದರು. ಅವರ ಹೇಳಿಕೆಗಳೆಲ್ಲವೂ ಉಲ್ಟಾ ಆಗಿವೆ. ಲೋಕಸಭೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದಿದ್ದರು. ಆದರೆ ಕರ್ನಾಟಕದ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಅಧಿಕಾರಲ್ಲಿದೆ, ಜ್ಞಾನೇಂದ್ರ ಕೂಡಲೇ ರಾಜೀನಾಮೆ ಸಲ್ಲಿಸಬೇಕು: ಸಿದ್ದರಾಮಯ್ಯ
ಇದನ್ನೂ ಓದಿ: ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು