ಮೈಸೂರು, (ಮಾರ್ಚ್ 28): ಒಂದು ಕಡೆ ಬಿಜೆಪಿಯಿಂದ ಅಳಿಯನಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ನಿರಾಸೆಯಲ್ಲಿರುವ ಸಂಸದ ಶ್ರೀನಿವಾಸ್ ಪ್ರಸಾದ್ಗೆ ಮತ್ತೊಂದೆಡೆ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಗಾಳ ಹಾಕಿದೆ. ಸದ್ಯ ರಾಜಕೀಯ ನಿವೃತ್ತಿ ಘೋಷಿಸಿರುವ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದಂಡೇ ಭೇಟಿ ನೀಡಿ ಬೆಂಬಲ ಕೇಳಿದೆ. ಹೌದು…ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಅವರ ಜೊತೆಗಿನ ವೈರತ್ವ ಮರೆತು ಕಾಂಗ್ರೆಸ್ ನಾಯಕರು ಒಂದಾಗೋಣ ಬನ್ನಿ ಎಂದು ಅವರ ಮನೆಗೆ ಹೋಗಿದ್ದಾರೆ. ಹೌದು…ಕೆಲ ರಾಜಕೀಯ ಕಾರಣಗಳಿಂದ ದೂರ ದೂರವಾಗಿದ್ದ ಸಚಿವರಾದ ಡಾ. ಎಚ್ಸಿ ಮಾಹದೇವಪ್ಪ, ಕೆ. ವೆಂಕಟೇಶ್, ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ, ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಇಂದು(ಮಾರ್ಚ್ 28) ಮೈಸೂರಿನಲ್ಲಿರವ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮಾಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರು ಕಾಂಗ್ರೆಸ್ನಿಂದ ಚಾಮರಾಜನಗರದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಾಗಿ ಮಾಹದೇವಪ್ಪ ಅವರು ರಾಜಕೀಯ ವೈಷಮ್ಯವನ್ನು ಮರೆತು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆ ಬಾಗಿಲಿಗೆ ಹೋಗಿದ್ದು, ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲ್ಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಶ್ರೀನಿವಾಸ್ ಪ್ರಸಾದ್ ಅವರು ನಾನು ರಾಜಕೀಯವಾಗಿ ಈಗ ಯಾರನ್ನು ಕೂಡ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀನಿವಾಸ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ, ರಾಜಕೀಯ ವಿಚಾರಕ್ಕೆ ವಿ.ಶ್ರೀನಿವಾಸ್ ಪ್ರಸಾದ್, ನಾವು ದೂರವಾಗಿದ್ದೆವು. ಆ ವೇಳೆ ನಾವು ಅವರನ್ನು ಸೋಲಿಸಿದ್ದೆವು, ಅವರು ನಮ್ಮನ್ನು ಸೋಲಿಸಿದ್ದರು. ಹಾಗಂತ ನಾವು ರಾಜಕೀಯ ಶತ್ರುಗಳಲ್ಲ. ರಾಜಕೀಯವಾಗಿ ಅಷ್ಟೇ ವಿರೋಧ ಇದ್ದದ್ದು, ಪರಸ್ಪರ ಗೌರವದಿಂದ ಇದ್ದೇವೆ. ರಾಜಕೀಯದಿಂದ ವಿದಾಯ ಹೇಳಿದ್ದಕ್ಕೆ ವಿ.ಶ್ರೀನಿವಾಸ್ ಭೇಟಿ ಮಾಡಿದ್ದೇವೆ. ಬೇರೆ ಯಾವ ವಿಚಾರವೂ ವಿ.ಶ್ರೀನಿವಾಸ್ ಪ್ರಸಾದ್ ಜೊತೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ನಾನು ರಾಜಕೀಯವಾಗಿ ಈಗ ಯಾರನ್ನು ಕೂಡ ಬೆಂಬಲಿಸುವುದಿಲ್ಲ. ನಾನು ರಾಜಕೀಯಕ್ಕೆ ನಿವೃತ್ತಿ ಹೇಳಿದ್ದೇನೆ. ನನ್ನ ಅಭಿಮಾನಿಗಳು ತಮ್ಮ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನು ರಾಜಕೀಯವಾಗಿ ಯಾವ ನಿರ್ಧಾರವನ್ನು ಹೇಳುವುದಿಲ್ಲ. ಮೊನ್ನೆ BJP, BSPಯವರು ಬಂದಿದ್ದರು, ಈಗ ಕಾಂಗ್ರೆಸ್ನವರು ಬಂದಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ಬೇಡ. ಬಿಜೆಪಿ ಟಿಕೆಟ್ ಹಂಚಿಕೆ ಬಗ್ಗೆ ಹೈಕಮಾಂಡ್ ನನ್ನ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.