AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂ ಬಳಿ ಸಹಾಯ ಮಾಡುವ ನೆಪದಲ್ಲಿ ವಂಚನೆ: ಕದ್ದ ಹಣದಿಂದ ಹೆಂಡತಿಗೆ ಚಿನ್ನ ಕೊಡಿಸಿದ ಕಳ್ಳ

ಅಮಾಯಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ. ತನ್ನ ಬಳಿ ಬಳಕೆಯಾಗದ ಎಟಿಎಂ ಕಾರ್ಡ್ ಇಟ್ಟುಕೊಂಡಿದ್ದ ಆರೋಪಿ, ಪಿನ್ ಪಡೆದ ಹಣ ಡ್ರಾ ಮಾಡಿಕೊಟ್ಟು ಕಾರ್ಡ್ ಬದಲಾಯಿಸುತ್ತಿದ್ದ.

ಎಟಿಎಂ ಬಳಿ ಸಹಾಯ ಮಾಡುವ ನೆಪದಲ್ಲಿ ವಂಚನೆ: ಕದ್ದ ಹಣದಿಂದ ಹೆಂಡತಿಗೆ ಚಿನ್ನ ಕೊಡಿಸಿದ ಕಳ್ಳ
ಕಳ್ಳನಿಂದ ವಶಪಡಿಸಿಕೊಂಡ ಹಣ, ನಗದು, ಚಿನ್ನದ ಸರ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 03, 2022 | 11:29 AM

ಮೈಸೂರು: ಎಟಿಎಂ ಬಳಿ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಕೆ.ಆರ್. ನಗರ ಪೊಲೀಸರ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಹೆಚ್.ಡಿ ಕೋಟೆಯ ಶ್ರೀನಿವಾಸ್ ಬಂಧಿತ ಆರೋಪಿ. ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಅಮಾಯಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ. ತನ್ನ ಬಳಿ ಬಳಕೆಯಾಗದ ಎಟಿಎಂ ಕಾರ್ಡ್ ಇಟ್ಟುಕೊಂಡಿದ್ದ ಆರೋಪಿ, ಪಿನ್ ಪಡೆದ ಹಣ ಡ್ರಾ ಮಾಡಿಕೊಟ್ಟು ಕಾರ್ಡ್ ಬದಲಾಯಿಸುತ್ತಿದ್ದ. ನಂತರ ಬೇರೆ ಕಡೆ ಹೋಗಿ ಹಣ ಡ್ರಾ ಮಾಡುತ್ತಿದ್ದ. ಈ ಬಗ್ಗೆ ಕೆ.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ವಂಚನೆಗೊಳಗಾದವರು ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳನ ಕೈಚೆಳಕ ಪತ್ತೆಯಾಗಿದೆ. ವಿಚಾರಣೆ ವೇಳೆ ನಾಲ್ಕು ಜನರಿಗೆ ವಂಚನೆ ಮಾಡಿದ್ದು, ಎಟಿಎಂನಲ್ಲಿ ಕದ್ದ ಹಣದಿಂದ ಹೆಂಡತಿಗೆ ಚಿನ್ನ ಕೊಡಿಸಿದ್ದ.  ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಲಾರಿ ಡಿಕ್ಕಿ: ಚಾಲಕನ ಸ್ಥಿತಿ ಗಂಭೀರ

ಕಾರವಾರ: ಮರಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ದುಗಣ್ಣಬೈಲ್ ಬಳಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ದೌಡಾಯಿಸಿರುವ ಅಂಕೋಲಾ ಪೊಲೀಸರು ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಜೆಸಿಬಿ ಮೂಲಕ ಹೊರತೆಗೆದಿದ್ದಾರೆ. ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಪಘಾತದಿಂದ ವಾಹನ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಚಿಕಿತ್ಸೆ ನೀಡಿದ ಬಿಲ್ ಕೇಳಿದ್ದಕ್ಕೆ ಆಸ್ಪತ್ರೆ ಉಡಾಯಿಸುವ ಬೆದರಿಕೆ

ಬೆಂಗಳೂರು; ಚಿಕಿತ್ಸೆ ನೀಡಿದ ಬಿಲ್ ಕೇಳಿದ್ದಕ್ಕೆ ಆಸ್ಪತ್ರೆ ಉಡಾಯಿಸುವ ಬೆದರಿಕೆ ಹಾಕಿದ್ದಲ್ಲದೇ, ಅನುಮತಿ ಇಲ್ಲದೆ ಪೇಷಂಟ್ ಡಿಸ್ಚಾರ್ಜ್ ಮಾಡಿದ ಪುಂಡರನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ವೆಂಕಟೇಶಪುರದ ನವಾಜ್, ಹುಸೇನ್, ಸೈಯದ್ ಅಬ್ಬಾಸ್​ ಸಗೀರ್​ ಪಾಷಾ ಬಂಧಿತ ಆರೋಪಿಗಳು. ಅನಾರೋಗ್ಯ ಹಿನ್ನೆಲೆ ಸೈಯದ್ ಷರೀಫ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶ್ವಾಸಕೋಶದಲ್ಲಿ ನೀರಿನ ಅಂಶ ಇರುವುದರಿಂದ 10 ದಿನ ಚಿಕಿತ್ಸೆ ನೀಡಲಾಗಿದೆ. ಚಿಕಿಕ್ಸಾ ವೆಚ್ಚ ಹೆಚ್ಚಾಗಲಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ಚಿಕಿತ್ಸೆಗೂ ಮೊದಲೇ 41 ಸಾವಿರ ರೂ. ಶುಲ್ಕ ಪಾವತಿಸಿದ್ದ ಸೈಯದ್, ಆದರೆ 2 ಲಕ್ಷದ 9 ಸಾವಿರ ಚಿಕಿತ್ಸಾ ವೆಚ್ಚ ಏರಿಸಿದ್ದಾರೆಂದು ಆರೋಪಿಸಿದ್ದಾರೆ. ಉಳಿದ ಒಂದು ಲಕ್ಷದ ಎಪತ್ತೆಂಟು ಸಾವಿರ ಹಣ ಕಟ್ಟಿಲ್ಲಾ. ಬದಲಾಗಿ ಆಸ್ಪತ್ರೆಗೆ ನುಗ್ಗಿ ಗುಣಮುಖನಾಗದ ಸೈಯದ್ ಶರೀಫ್ ನನ್ನ ಆರೋಪಿಗಳು ಹೊತ್ತೊಯ್ದಿದ್ದಾರೆ. ವೈದ್ಯರಿಗೆ ಬೆದರಿಸಿ, ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಕೆಜಿ‌ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಅಪರಿಚಿರ ವ್ಯಕ್ತಿ ಚಾಕುವಿನಿಂದ ಹಲ್ಲೆ

ತುಮಕೂರು: ಅಪರಿಚಿರ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೋಕೆಶ್ ಎಂಬುವರ ಎಡಗೈ ಗೆ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದು, ಕುಣಿಗಲ್ ತಾಲ್ಲೂಕು ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗ್ರಾಮದ ಮುತ್ತುರಾಜ್ ಎಂಬಾತನಿಂದ ಕೃತ್ಯ ವೆಸಗಲಾಗಿದೆ ಎನ್ನಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಸ್ತೆಯಲ್ಲಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ

ಬಾಗಲಕೋಟೆ: ರಸ್ತೆಯಲ್ಲಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ನಾಲ್ವರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ದುರಂತ ನಡೆದಿದೆ. ಕ್ಯಾಂಟರ್​ ಟೈರ್​ ಪಂಕ್ಚರ್​​ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು. ಟೈರ್​ ಬದಲಾಯಿಸುತ್ತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೀಳಗಿ ಮೂಲದ ರಾಮಸ್ವಾಮಿ, ರಜಾಕ್ ತಾಂಬೂಳೆ, ನಾಶೀರ್ ಮುಲ್ಲಾ, ಮಲ್ಲಪ್ಪ ಮಳಲಿ ಸಾವಿಗೀಡಾಗಿದ್ದಾರೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಈರುಳ್ಳಿ ಹೇರಿಕೊಂಡು ಕ್ಯಾಂಟರ್ ಬೆಂಗಳೂರಿಗೆ ಹೊರಟಿತ್ತು. ಬೀಳಗಿ ತಾಲೂಕಿನ ಬಾಡಗಂಡಿ ಬಳಿ ವಾಹನ ಪಂಚರ್ ಆಗಿದೆ. ಚಾಲಕ ನಾಶೀರ್ ಮುಲ್ಲಾ ವಾಹನ ಮಾಲೀಕ ಮಲ್ಲಪ್ಪ ಅವರಿಗೆ ಫೋನ್ ಮಾಡಿ ಹೇಳಿದ್ದ. ಬೀಳಗಿ ಪಟ್ಟಣದಿಂದ ರಾಮಸ್ವಾಮಿ ಎನ್ನುವ ವ್ಯಕ್ತಿಯ ಟಂಟಂನಲ್ಲಿ ಟೈರ್ ಹಾಕಿಕೊಂಡು ಒಟ್ಟು ಐವರು ತೆರಳಿದ್ದರು. ಒಬ್ಬ ಸ್ಟೇಪ್ನಿ ಹತ್ತಿರ ಕೆಲಸ ಮಾಡ್ತಿದ್ದು, ಉಳಿದ ನಾಲ್ವರು ವಾಹನ ಪಕ್ಕ ನಿಂತಿದ್ರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಬೀಳಗಿ ಆಸ್ಪತ್ರೆಯಲ್ಲಿ ನಾಲ್ವರ ಶವ ಪರೀಕ್ಷೆ ಮಾಡಿದ್ದು, ಆಸ್ಪತ್ರೆ ಆವರಣದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಂಎಲ್​ಸಿ ಹನಮಂತ ನಿರಾಣಿ ಬೀಳಗಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪೊಲೀಸರಿಂದ ಘಟನೆಯ ಮಾಹಿತಿ ಪಡೆದ ಎಂಎಲ್ಸಿ ಸರಕಾರದಿಂದ ಸೂಕ್ತ ಪರಿಹಾರ ಭರವಸೆ ನೀಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಗೆ ಗಾಯ

ಮೈಸೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಗೆ ಗಾಯವಾಗಿರುವಂತಹ ಘಟನೆ ಜಿಲ್ಲೆ ಹುಣಸೂರು ತಾಲ್ಲೂಕಿನ ಅರಬ್ಬಿ ತಿಟ್ಟು ಬಳಿ ನಡೆದಿದೆ. ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ್ದು, ಜಿಂಕೆಗೆ ಚಿಕಿತ್ಸೆ ನೀಡಿದ್ದು, ಸದ್ಯ ಜಿಂಕೆ ಚೇತರಿಸಿಕೊಳ್ಳುತ್ತಿದೆ.

ಮಾರಮ್ಮನ ದೇವಾಲಯ ದಲ್ಲಿ ಕಳ್ಳತನ

ತುಮಕೂರು: ಗ್ರಾಮದ ಹೊರವಲಯದಲ್ಲಿರುವ ಮಾರಮ್ಮನ ದೇವಾಲಯವನ್ನು ಬೀಗ ಒಡೆದು ದುಷ್ಕರ್ಮಿಗಳು ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉದ್ದನಪ್ಪನಕುಂಟೆ ಬಳಿಯಿರುವ ಮಾರಮ್ಮ ದೇವಾಲಯದಲ್ಲಿ ಕಳ್ಳತನವಾಗಿದ್ದು, ದೇವಿಯ ಪಂಚಲೋಹದ ಕಿರೀಟ, 6 ಗ್ರಾಂ ಚಿನ್ನದ ತಾಳಿ, ಬೆಳ್ಳಿಕವಚ ಸಮೇತ ಶಿವಸಾಲಿಗ್ರಾಮ ಮತ್ತು ಹುಂಡಿಯಲ್ಲಿದ್ದ ಹಣ ಕೂಡ ಕಳವು ಮಾಡಿದ್ದಾರೆ. ಒಟ್ಟು ಇದೇ ದೇವಾಲಯದಲ್ಲಿ ಆರು ಬಾರಿ ಕಳವು ಆಗಿದೆ ಎನ್ನಲಾಗಿದೆ. ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 am, Fri, 3 June 22