ಮೈಸೂರು, ಜ.7: ರಾಜ್ಯ ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ (Mysuru) ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉದ್ಯೋಗದಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಹೋಟೆಲ್ನಲ್ಲಿ ಕಾಫಿ, ಟೀ, ತಿಂಡಿ, ದೋಸೆ ಬೆಲೆಯೇ 150 ರೂಪಾಯಿ ಆಗಿದೆ. ನೀವು ಕೊಡುವ ದುಡ್ಡಿನಲ್ಲಿ ಅವರು ಕಾಫಿ ಕುಡಿಯಲು ಯೋಚನೆ ಮಾಡಬೇಕಾಗುತ್ತದೆ. ಮೂರು ಸಾವಿರ, ಒಂದೂವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಲಾಗುತ್ತಿದೆ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ 60% ಕನ್ನಡ ಕಡ್ಡಾಯಕ್ಕೆ ಸುಗ್ರಿವಾಜ್ಞೆ ಹೊರಡಿಸಿದ ರಾಜ್ಯ ಸರ್ಕಾರ
ಪದವೀಧರರ ಸಮಸ್ಯೆ ಆಲಿಸಲು ಓಬ್ಬ ಸಚಿವರನ್ನ ನೇಮಕ ಮಾಡಿ. ಉನ್ನತ ಶಿಕ್ಷಣ ಮಾಡಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಮಠಾಧೀಶರ ಕಾಲೇಜುಗಳಲ್ಲಿ ಹೊರಗಿನ ರಾಜ್ಯದವರಿಗೆ ಸೀಟು ಕೊಟ್ಟಿದ್ದೀರಿ. ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ರಾಜ್ಯದಲ್ಲಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ವಿಚಾರವಾಗಿ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧನ ಮಾಡಬಾರದಾಗಿತ್ತು. ಸರ್ಕಾರ ಬಂಧನ ಮಾಡಿದೆ, ಆದರೆ ಕೋರ್ಟ್ ಬಿಡುಗಡೆ ಮಾಡುತ್ತಿದೆ. ಕನ್ನಡ ಬೋರ್ಡ್ ಹಾಕಿ ಅಂತಾ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ