ಮೈಸೂರಿನ ಬಹುರೂಪಿ ರಂಗೋತ್ಸವದಲ್ಲಿ ಜಾನಪದೋತ್ಸವಕ್ಕೆ ಚಾಲನೆ
ಬಹುರೂಪಿಯ ಮೊದಲ ದಿನ ಮಹಾದೇವ ಮತ್ತು ತಂಡದವರಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಅವರಿಂದ ‘ಪಂಚವಟಿ’ ಯಕ್ಷಗಾನ ಹಾಗೂ ಇಡಗುಂಜಿ ಮೇಳವೂ ನಡೆಯಿತು.
ಮೈಸೂರು: ಮೈಸೂರಿನಲ್ಲಿ ಬಹುರೂಪಿಯ ರಾಷ್ಟ್ರೀಯ ರಂಗೋತ್ಸವದ (Bahuroopi National Theatre Festival) ಅಧಿಕೃತ ಉದ್ಘಾಟನೆಯ ಪೂರ್ವಭಾವಿಯಾಗಿ ‘ಜಾನಪದೋತ್ಸವ’ವನ್ನು(Janapadotsava) ಗುರುವಾರ ಉದ್ಘಾಟನೆ ಮಾಡಲಾಯಿತು. ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಉಪಸ್ಥಿತಿಯಲ್ಲಿ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಜಾನಪದೋತ್ಸವವನ್ನು ಉದ್ಘಾಟಿಸಿದರು.
ಬಹುರೂಪಿಯ ಮೊದಲ ದಿನ ಮಹಾದೇವ ಮತ್ತು ತಂಡದವರಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಅವರಿಂದ ‘ಪಂಚವಟಿ’ ಯಕ್ಷಗಾನ ಹಾಗೂ ಇಡಗುಂಜಿ ಮೇಳವೂ ನಡೆಯಿತು. ಈ ವೇಳೆ ಮಾತನಾಡಿದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರಿಯಪ್ಪ, ‘ಭಾರತೀಯತೆ’ ವಿಷಯವಾಗಿ ಒಂದು ವಾರದ ರಂಗೋತ್ಸವ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಕಲಾ ಶಿಬಿರ, ಜಾನಪದ ಶಿಬಿರ, ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಮೇಳ, ಕಲಾಕೃತಿಗಳ ಪ್ರದರ್ಶನ, ಅನ್ನಸಂತರ್ಪಣೆ, ಅನುಭವ ಪ್ರದರ್ಶನ ನಡೆಯಲಿದೆ ಎಂದರು.
ಇದನ್ನೂ ಓದಿ: ಮೈಸೂರಿನಲ್ಲಿ ಮಾರ್ಚ್ 11ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಈ ವರ್ಷ ಭೂಮಿಗೀತ, ಕಲಾಮಂದಿರ, ವನರಂಗ, ಬಿ.ವಿ.ಕರಣ ರಂಗಚಾವಡಿ, ಸಂಪತ್ ರಂಗಮಂದಿರದಲ್ಲಿ ಕನ್ನಡದ 12 ನಾಟಕಗಳು, ತುಳು ನಾಟಕ ಸೇರಿದಂತೆ 7 ಭಾಷೆಯ ನಾಟಕಗಳನ್ನು ಬಿಂಬಿಸುವ 7 ರಾಜ್ಯಗಳ ರಂಗತಂಡಗಳು ಪ್ರದರ್ಶನಗೊಳ್ಳಲಿವೆ ಎಂದರು.
23ನೇ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಡಿ. 10ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮೈಸೂರಿನ ರಂಗಾಯಣದ ಆವರಣದಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕ, 12 ಕನ್ನಡ ಹಾಗೂ ಒಂದು ತುಳು ನಾಟಕ ಸೇರಿ ಒಟ್ಟು 20 ರಂಗ ಪ್ರಯೋಗ ಬಹುರೂಪಿ ರಂಗೋತ್ಸವದಲ್ಲಿ ನಡೆಯಲಿದೆ. ಡಿ. 10ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಟ ರಮೇಶ್ ಅರವಿಂದ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್, ಮೇಯರ್ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.